ಪತ್ರಕರ್ತ ಜಮಾಲ್ ನಾಪತ್ತೆಯ ಹಿಂದೆ ‘ದುಷ್ಟ ಹಂತಕರು’: ಡೊನಾಲ್ಡ್ ಟ್ರಂಪ್

Update: 2018-10-16 18:02 GMT

ವಾಶಿಂಗ್ಟನ್, ಅ. 16: ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿಯ ನಿಗೂಢ ನಾಪತ್ತೆಯ ಹಿಂದೆ ‘ದುಷ್ಟ ಹಂತಕರು’ ಶಾಮೀಲಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಟರ್ಕಿಯ ನಗರ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕಾನ್ಸುಲೇಟ್ ಕಚೇರಿಗೆ ಅಕ್ಟೋಬರ್ 2ರಂದು ಪ್ರವೇಶಿಸಿದ್ದ ಜಮಾಲ್ ವಾಪಸ್ ಹೊರಗೆ ಬಂದಿಲ್ಲ.

ಖಶೋಗಿ ಬಗ್ಗೆ ನಾನು ಸೌದಿ ಅರೇಬಿಯದ ದೊರೆ ಸಲ್ಮಾನ್ ಜೊತೆಗೆ 20 ನಿಮಿಷಗಳ ಕಾಲ ಮಾತನಾಡಿದೆ ಎಂದು ಟ್ರಂಪ್ ಹೇಳಿದರು. ದೊರೆ ಸಲ್ಮಾನ್‌ಗಾಗಲಿ, ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ಗಾಗಲಿ ಈ ಘಟನೆಯ ಬಗ್ಗೆ ಅರಿವಿದ್ದಂತೆ ಅನಿಸುತ್ತಿಲ್ಲ ಎಂದು ಅವರು ನುಡಿದರು.

ಸೌದಿ ಕಾನ್ಸುಲೇಟ್ ಕಚೇರಿಯ ಒಳಗೆ ಜಮಾಲ್‌ರನ್ನು ಹತ್ಯೆ ಮಾಡಲಾಗಿದೆ ಹಾಗೂ ಬಳಿಕ ಅವರ ಶವವನ್ನು ಹೊರಗೆ ಸಾಗಿಸಲಾಗಿದೆ ಎಂದು ಟರ್ಕಿ ಆರೋಪಿಸಿದೆ. ಇದನ್ನು ಸೌದಿ ಅರೇಬಿಯ ನಿರಾಕರಿಸಿದೆ.

‘‘ಘಟನೆಯ ಹಿಂದೆ ದುಷ್ಟ ಹಂತಕರು ಇರಬಹುದು ಎಂದು ನನಗನಿಸುತ್ತಿದೆ, ಯಾರಿಗೆ ಗೊತ್ತು?’’ ಎಂದು ಟ್ರಂಪ್ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಆದರೆ, ತನ್ನ ಈ ನಿಲುವಿಗೆ ಏನು ಕಾರಣ ಎಂಬ ಬಗ್ಗೆ ಅವರು ವಿವರ ನೀಡಲಿಲ್ಲ.

ಸೌದಿ ದೊರೆ ಜೊತೆ ಪಾಂಪಿಯೊ ಮಾತುಕತೆ

 ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ನಿಗೂಢ ನಾಪತ್ತೆ ಬಗ್ಗೆ ಸೌದಿ ಅರೇಬಿಯದ ದೊರೆಯೊಂದಿಗೆ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊರನ್ನು ಮಂಗಳವಾರ ಸೌದಿ ಅರೇಬಿಯಕ್ಕೆ ಕಳಹಿಸಿದ್ದಾರೆ.

ಸೌದಿ ಅರೇಬಿಯಕ್ಕೆ ಆಗಮಿಸಿರುವ ಪಾಂಪಿಯೊ, ಈ ವಿಷಯದಲ್ಲಿ ಸೌದಿ ದೊರೆಯೊಂದಿಗೆ ಮುಖಾಮುಖಿ ಮಾತುಕತೆ ನಡೆಸಲಿದ್ದಾರೆ.

ಸೌದಿ ಯುವರಾಜನನ್ನು ಪಾರು ಮಾಡಲು ಯೋಜನೆ?

ಇಸ್ತಾಂಬುಲ್‌ನಲ್ಲಿರುವ ಸೌದಿ ಕಾನ್ಸುಲೇಟ್ ಕಚೇರಿಯಲ್ಲಿ ನಡೆಸಿದ ವಿಚಾರಣೆಯ ವೇಳೆ ಆಕಸ್ಮಕವಾಗಿ ಪತ್ರಕರ್ತ ಜಮಾಲ್ ಖಶೋಗಿ ಮೃತಪಟ್ಟರು ಎಂಬ ವಿವರಣೆಯನ್ನು ನೀಡಲು ಸೌದಿ ಅರೇಬಿಯ ಸಿದ್ಧತೆ ನಡೆಸಿದೆ ಎಂದು ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಜಮಾಲ್‌ರ ವಿಚಾರಣೆ ನಡೆಸಲು ಅಥವಾ ಸೌದಿ ಅರೇಬಿಯಕ್ಕೆ ಮರಳಿ ಕರೆತರಲು ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ತನ್ನ ಗುಪ್ತಚರ ತಂಡಕ್ಕೆ ಆದೇಶ ನೀಡಿದ್ದರು ಎಂದು ಪತ್ರಿಕೆ ಹೇಳಿದೆ.

ಸೌದಿ ಅರೇಬಿಯ ಸರಕಾರವು ಯುವರಾಜನನ್ನು ರಕ್ಷಿಸುವುದು ಹಾಗೂ ಪತ್ರಕರ್ತನ ಹತ್ಯೆಯ ಹೊಣೆಯನ್ನು ಗುಪ್ತಚರ ಅಧಿಕಾರಿಯೊಬ್ಬರ ಮೇಲೆ ಹೊರಿಸುವುದು ಎಂದು ಸೌದಿ ಮೂಲವೊಂದನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

ಅಂತಾರಾಷ್ಟ್ರೀಯ ತನಿಖೆಗೆ ಮಕ್ಕಳ ಮನವಿ

 ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ನಿಗೂಢ ನಾಪತ್ತೆ ಬಗ್ಗೆ ‘ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಅಂತಾರಾಷ್ಟ್ರೀಯ ಆಯೋಗ’ವೊಂದು ತನಿಖೆ ನಡೆಸಬೇಕು ಎಂದು ಅವರ ಮಕ್ಕಳು ಒತ್ತಾಯಿಸಿದ್ದಾರೆ.

‘‘ನಮ್ಮ ತಂದೆ ನಮ್ಮಲ್ಲಿ ರೂಪಿಸಿದ ಪ್ರಬಲ ನೈತಿಕ ಹಾಗೂ ಕಾನೂನು ಜವಾಬ್ದಾರಿಯು, ನಮ್ಮ ತಂದೆಯ ಸಾವಿಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಅಂತಾರಾಷ್ಟ್ರೀಯ ಆಯೋಗವೊಂದನ್ನು ಸ್ಥಾಪಿಸಲು ಒತ್ತಾಯಿಸುವಂತೆ ನಮ್ಮನ್ನು ಮಾಡಿದೆ’’ ಎಂಬ ಹೇಳಿಕೆಯನ್ನು ಅವರ ಮಕ್ಕಳು ಟ್ವಿಟರ್‌ನಲ್ಲಿ ಹಾಕಿದ್ದಾರೆ.

ಸೌದಿ ವಾಣಿಜ್ಯ ಶೃಂಗ ಸಮ್ಮೇಳನಕ್ಕೆ ಗೂಗಲ್ ಗೈರು

ಸೌದಿ ಅರೇಬಿಯದ ಭಿನ್ನಮತೀಯ ಪತ್ರಕರ್ತ ಜಮಾಲ್ ಖಶೋಗಿಯ ನಿಗೂಢ ನಾಪತ್ತೆಯ ಹಿನ್ನೆಲೆಯಲ್ಲಿ, ಸೌದಿ ಅರೇಬಿಯದಲ್ಲಿ ನಡೆಯಲಿರುವ ವಾಣಿಜ್ಯ ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿದೆ.

ರಿಯಾದ್‌ನಲ್ಲಿ ಅಕ್ಟೋಬರ್ 23ರಂದು ಆರಂಭಗೊಳ್ಳಲಿರುವ ‘ಫ್ಯೂಚರ್ ಇನ್‌ವೆಸ್ಟ್‌ಮೆಂಟ್ ಇನಿಶಿಯೇಟಿವ್’ ಶೃಂಗ ಸಮ್ಮೇಳನದಲ್ಲಿ ಗೂಗಲ್ ಕ್ಲೌಡ್ ಮುಖ್ಯಾಧಿಕಾರಿ ಡಯಾನ್ ಗ್ರೀನ್ ಭಾಗವಹಿಸುವುದಿಲ್ಲ ಎಂದು ಹೇಳಿಕೆಯೊಂದರಲ್ಲಿ ಗೂಗಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News