ಫೇಸ್‌ಬುಕ್ ಅಧ್ಯಕ್ಷ ಮಾರ್ಕ್ ಝುಕರ್‌ ಬರ್ಗ್ ವಿರುದ್ಧ ಷೇರುದಾರರ ದಂಗೆ !

Update: 2018-10-18 03:46 GMT

ವಾಷಿಂಗ್ಟನ್, ಅ. 18: ಫೇಸ್‌ಬುಕ್ ಅಧ್ಯಕ್ಷ ಮಾರ್ಕ್ ಝುಕರ್‌ ಬರ್ಗ್ ವಿರುದ್ಧ ಷೇರುದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣದ ಆಡಳಿತ ಮತ್ತು ಬದ್ಧತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸ್ವತಂತ್ರ ಅಧ್ಯಕ್ಷರನ್ನು ನೇಮಿಸಬೇಕು ಎಂಬ ಒತ್ತಾಯ ಬಲವಾಗಿ ಕೇಳಿ ಬರುತ್ತಿದೆ.

ನಾಲ್ಕು ಪ್ರಮುಖ ಸಾರ್ವಜನಿಕ ಹೂಡಿಕೆ ಸಂಸ್ಥೆಗಳು ಸ್ವತಂತ್ರ ಅಧ್ಯಕ್ಷರ ನೇಮಕದ ಪರವಾಗಿ ಎದ್ದಿರುವ ಒತ್ತಾಯಕ್ಕೆ ದನಿಗೂಡಿಸಿವೆ. ಟ್ರಿಲಿಯಂ ಅಸೆಟ್ ಮ್ಯಾನೇಜ್‌ಮೆಂಟ್ ಕೆಲ ತಿಂಗಳ ಹಿಂದೆ ಆಗ್ರಹ ಮಂಡಿಸಿ, ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಪಾತ್ರಗಳನ್ನು ಪ್ರತ್ಯೇಕಿಸಬೇಕು ಎಂದು ಆಗ್ರಹಿಸಿತ್ತು. ಇದೀಗ ಇಲ್ಯೂನಿಯಸ್, ರೋಡ್ ಐಲ್ಯಾಂಡ್, ಪೆನ್ಸಿಲ್‌ ವಾನಯಾ ಮತ್ತು ನ್ಯೂಯಾರ್ಕ್ ಸಿಟಿ ಕ್ರಂಟೋಲರ್ ರಾಜ್ಯ ಖಜಾನೆಗಳು ಇದಕ್ಕೆ ದನಿಗೂಡಿಸಿವೆ. ಪ್ರಸ್ತುತ ಎರಡೂ ಹುದ್ದೆಗಳನ್ನು ಝುಕರ್‌ ಬರ್ಗ್ ನಿರ್ವಹಿಸುತ್ತಿದ್ದಾರೆ.

ಒಂದು ಕೋಟಿಗೂ ಅಧಿಕ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯ ಕಳ್ಳತನ, ವಿದೇಶೀಯರು ಪ್ಲಾಟ್‌ಫಾರಂ ವಿರೂಪಗೊಳಿಸುವುದು, ಈ ಜಾಲತಾಣದ ಮೂಲಕ ಮ್ಯಾನ್ಮಾರ್‌ನಲ್ಲಿ ದ್ವೇಷ ಹರಡುವಂಥ ಹಲವು ದೊಡ್ಡ ಹಗರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸ್ವತಂತ್ರ ಮೇಲ್ವಿಚಾರಣೆ ಅಗತ್ಯವಿದೆ ಎಂದು ಟ್ರಿಲಿಯಮ್ ಆಗ್ರಹಿಸಿತ್ತು.

"ಫೇಸ್‌ಬುಕ್ ನಮ್ಮ ಸಮಾಜ ಮತ್ತು ಆರ್ಥಿಕತೆಯ ಪಾತ್ರವನ್ನು ಮೀರಿ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಸಾಮಾಜಿಕ ಮತ್ತು ಆರ್ಥಿಕ ಹೊಣೆಗಾರಿಕೆ ಇದ್ದು, ಇದು ಪಾರದರ್ಶಕವಾಗಿರಬೇಕು. ಈ ಕಾರಣದಿಂದ ಕಂಪನಿಯ ಬೋರ್ಡ್‌ರೂಂಗೆ ಉತ್ತರಿಸುವ ಹೊಣೆ ಇರುವ ಸ್ವತಂತ್ರ ವ್ಯಕ್ತಿ ಬೇಕು ಎಂಬ ಆಗ್ರಹ ಮಂಡಿಸುತ್ತಿದ್ದೇವೆ" ಎಂದು ನ್ಯೂಯಾರ್ಕ್ ಸಿಟಿ ಕಂಟ್ರೋಲರ್ ಸ್ಕಾಟ್ ಸ್ಟ್ರಿಂಜರ್ ಸ್ಪಷ್ಟಪಡಿಸಿದ್ದಾರೆ.

ಇಂಥದ್ದೇ ಹೇಳಿಕೆಯನ್ನು ಇಲಿನಿಯಸ್ ರಾಜ್ಯ ಖಜಾನಾ ಮುಖ್ಯಸ್ಥ ಮೈಕೆಲ್ ಫ್ರಾನ್ಸಿಸ್ ಮತ್ತಿತರರು ನೀಡಿದ್ದಾರೆ. ಝುಕರ್‌ ಬರ್ಗ್ ಅವರು ಫೇಸ್‌ಬುಕ್‌ನ ಶೇಕಡ 17ರಷ್ಟು ಷೇರು ಹೊಂದಿದ್ದು, ಅವಳಿ ಷೇರು ವರ್ಗದಲ್ಲಿ ಅವರಿಗೆ ಬಹುಮತದ ಷೇರುಗಳಿವೆ. ಆದ್ದರಿಂದ ಅವರನ್ನು ವಿರೋಧಿಸುವುದು ಕಷ್ಟಕರವಾಗಿದೆ.

ಸಾಮಾಜಿಕವಾಗಿ ಹೊಣೆಗಾರಿಕೆ ಹೊಂದಿದ ನಿಧಿಯಾಗಿ ಸ್ಥಾಪನೆಯಾದ ಟ್ರಿಲಿಯಂ, "ಕಾರ್ಪೊರೇಟ್ ಆಡಳಿತ ತಜ್ಞರ ಶಿಫಾರಸ್ಸಿಗೆ ಅನುಗುಣವಾಗಿ ಫೇಸ್‌ಬುಕ್‌ಗೆ ಪ್ರತ್ಯೇಕ ಸ್ವತಂತ್ರ ಅಧ್ಯಕ್ಷರ ನೇಮಕದ ಅಗತ್ಯವಿದೆ. ಈ ಬಗ್ಗೆ ಮುಂದಿನ ಮೇ ತಿಂಗಳಲ್ಲಿ ನಡೆಯುವ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗುವುದು. ಈಗಾಗಲೇ ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್, ಒರ್ಯಾಕಲ್ ಮತ್ತು ಟ್ವಿಟ್ಟರ್ ಪ್ರತ್ಯೇಕ ಸಿಇಒ ಮತ್ತು ಅಧ್ಯಕ್ಷರನ್ನು ಹೊಂದಿವೆ" ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News