ಉತ್ತಮ ಪತ್ರಕರ್ತನಾಗಲು ಉತ್ತಮ ಓದುಗನಾಗಬೇಕು : ದಿನೇಶ್ ಅಮೀನ್ ಮಟ್ಟು

Update: 2018-10-18 10:20 GMT

ಭಟ್ಕಳ, ಅ. 18: ಪತ್ರಕರ್ತರಾಗಲು ಬಯಸುವವರು ಮೊದಲು ಓದುವುದನ್ನು ಕಲಿಯಬೇಕು. ನೀವು ಎಷ್ಟು ಹೆಚ್ಚು ಪತ್ರಿಕೆಗಳನ್ನು, ನಿಯತಕಾಲಿಕಗಳನ್ನು, ಪುಸ್ತಕಗಳನ್ನು ಓದುತ್ತೀರಿ ಅಷ್ಟು ಒಳ್ಳೆಯ ಬರಹಗಾರರಾಗುತ್ತೀರಿ. ಓದದೆ ಪತ್ರಕರ್ತರಾಗಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ. 

ಅವರು ಭಟ್ಕಳದ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರಿನ ಮಾಧ್ಯಮ ಕೇಂದ್ರದ ಸಹಯೋಗದಲ್ಲಿ ನಡೆಸಿದ 'ವಿದ್ಯಾರ್ಥಿಗಳಿಗಾಗಿ ಪತ್ರಿಕೋದ್ಯಮ ಕಾರ್ಯಾಗಾರ'ದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.

ಮುಸ್ಲಿಮರು ಮುಖ್ಯವಾಹಿನಿಗೆ ಬರಬೇಕು ಎಂದು ಹೇಳುವುದನ್ನು ನಾನು ಪೂರ್ಣ ಒಪ್ಪುವುದಿಲ್ಲ. ಮುಸ್ಲಿಮೇತರರೂ ಮುಸ್ಲಿಮರ ಜೊತೆ ಮುಖ್ಯ ವಾಹಿನಿಗೆ ಬರಬೇಕಾಗಿದೆ. ಕನ್ನಡದ ಪ್ರಮುಖ ನೂರು ಲೇಖಕರನ್ನು, ಸಾಹಿತಿಗಳನ್ನು ತೆಗೆದುಕೊಂಡರೆ ಕನಿಷ್ಠ 10 - 15 ಮುಸ್ಲಿಮರು ಸಿಗುತ್ತಾರೆ. ಸುಮಾರು 25 ಮಂದಿ ದಲಿತರು , 25 - 30 ಹಿಂದುಳಿದ ಜಾತಿಯವರು ಇರುತ್ತಾರೆ. ಆದರೆ ಪತ್ರಕರ್ತರ ಪಟ್ಟಿ ಮಾಡಿದರೆ ನೂರರಲ್ಲಿ ಅಹಿಂದ ವರ್ಗಗಳ 10 - 15 ಮಂದಿಯೂ ಸಿಗುವುದಿಲ್ಲ. ಅಲ್ಲಿ ಕೇವಲ ಒಂದು ಸಮುದಾಯದವರೇ ತುಂಬಿ ಹೋಗಿದ್ದಾರೆ. ಸಾಹಿತಿ, ಕವಿ, ಲೇಖಕ ಆಗುವ ಸಾಮರ್ಥ್ಯ ಇರುವ ಅಹಿಂದ ವರ್ಗಗಳ ಪ್ರತಿಭಾವಂತರು ಏಕೆ ಪತ್ರಕರ್ತರಾಗುವುದು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಆ ಕ್ಷೇತ್ರಕ್ಕೆ ಹಾಕಿರುವ ಬೀಗದ ಕೀಲಿ ಕೈಯನ್ನು ಅಹಿಂದ ವರ್ಗ ಪಡೆಯಬೇಕಾಗಿದೆ ಎಂದು ಅಮೀನ್ ಮಟ್ಟು ಹೇಳಿದರು.

ಇಂದು ಯುವ ಲೇಖಕರು ಹೆಚ್ಚು ಬರೆಯುತ್ತಿಲ್ಲ. ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸಬೇಕಾಗಿದೆ. ಲೇಖಕರು, ಪತ್ರಕರ್ತರು ಅವರ ಸಮುದಾಯದೊಳಗಿನ ವಿಷಯಗಳ ಬಗ್ಗೆ ವಸ್ತುನಿಷ್ಠವಾಗಿ ಬರೆದಾಗ, ಪ್ರಶ್ನಿಸಿದಾಗ ಅದನ್ನು ಆ ಸಮುದಾಯ ಸ್ವೀಕರಿಸಬೇಕು, ಪ್ರೋತ್ಸಾಹಿಸಬೇಕು ಎಂದು ಅವರು ಕರೆ ನೀಡಿದರು.

ಹೈದರಾಬಾದ್ ನ ಸಿಯಾಸತ್ ಉರ್ದು ದೈನಿಕದ ವ್ಯವಸ್ಥಾಪಕ ಸಂಪಾದಕ ಝಹೀರುದ್ದೀನ್ ಅಲಿ ಖಾನ್ , ಖಲೀಜ್ ಟೈಮ್ಸ್  ಹಾಗು ಗಲ್ಫ್ ನ್ಯೂಸ್ ಪತ್ರಿಕೆಗಳ ಮಾಜಿ ಬ್ಯುರೋ ಚೀಫ್ ಸಯ್ಯದ್ ಖಮರ್ ಹಸನ್, ಭಟ್ಕಳ ಜಾಮಿಯಾ ಮಸೀದಿಯ ಧರ್ಮಗುರುಗಳಾದ ಮೌಲಾನಾ ಅಬ್ದುಲ್ ಅಲೀಮ್ ಖತೀಬ್, ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮತ್ತಿತರರು ಮಾತನಾಡಿದರು. 

ತಂಝೀಮ್ ಅಧ್ಯಕ್ಷ ಮುಝಮ್ಮಿಲ್ ಕಾಝಿಯ ಅಧ್ಯಕ್ಷತೆ ವಹಿಸಿದ್ದರು. ತಂಝೀಮ್ ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ಅಲ್ತಾಫ್ ಖರೂರಿ ಹಾಗು ಮಾಧ್ಯಮ ವಿಭಾಗದ ಸಂಚಾಲಕ ಆಫ್ತಾಬ್ ಕೋಲಾ, ತಂಝೀಮ್ ಉಪಾಧ್ಯಕ್ಷ ಮೊಹ್ತಿಶಮ್ ಮುಹಮ್ಮದ್ ಜಾಫರ್,ಖಾಝಿ ಮೌಲಾನ ಅಬ್ದುಲ್ ಅಝೀಮ್ ಕಾಝಿಯ, ಅಂಜುಮಾನ್ ಹಮಿ ಇ ಮುಸ್ಲಿಮೀನ್ ಅಧ್ಯಕ್ಷ ಅಬ್ದುರಹೀಮ್ ಜುಕಾಕು, ಜಾಮಿಯಾ ಇಸ್ಲಾಮಿಯಾ ಪ್ರಿನ್ಸಿಪಾಲ್ ಮೌಲಾನ ಮಕ್ಬೂಲ್ ಕೊಬಟ್ಟೆ, ಟಿಎಂಸಿ ಮುಖ್ಯಸ್ಥ ಮಟ್ಟ ಮುಹಮ್ಮದ್ ಸಿದ್ದೀಖ್, ಮೀಡಿಯಾ ಸಮಿತಿಯ ಸಂಚಾಲಕ ಇನಾಯತುಲ್ಲಾ ಗವಾಯಿ, ಭಟ್ಕಳ ಯೂತ್ ಫೆಡರೇಶನ್ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ ಮತ್ತು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಹಫೀಝ್ ಅಬೂಬಕರ್ ಉಕಸಾಹ ಕಿರಾಅತ್, ಹಸನ್ ಸಿದ್ದಿಬಾಪ ನಾತ್ ಪಠಿಸಿದರು. ಮೊಹಿದ್ದೀನ್ ಅಲ್ತಾಫ್ ಖರೂರಿ ಸ್ವಾಗತಿಸಿ, ತಂಝೀಮ್ ಉಪಾಧ್ಯಕ್ಷ  ಇನಾಯತುಲ್ಲಾ ಶಾಬಂದ್ರಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News