ಬಿಜೆಪಿ ಮುಖಂಡ ಅತಿಕ್ರಮಿಸಿದ ವಕ್ಫ್ ಆಸ್ತಿ ಬಿಡಿಸಿಕೊಡಲಿ: ಅನ್ವರ್ ಮಾಣಿಪ್ಪಾಡಿಗೆ ಸಚಿವ ಝಮೀರ್ ಅಹ್ಮದ್ ಸವಾಲು

Update: 2018-10-18 08:39 GMT

ಮಂಗಳೂರು, ಅ.18: ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿಗೆ ವಕ್ಫ್ ಆಸ್ತಿ ಅತಿಕ್ರಮಣದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಮೊದಲು ಅವರು ಬಿಜೆಪಿ ಮುಖಂಡ ರವಿಶಂಕರ್ ಮಿಜಾರು ಅತಿಕ್ರಮಿಸಿದ ವಕ್ಫ್ ಆಸ್ತಿಯನ್ನು ಬಿಡಿಸಿಕೊಡಲಿ ಎಂದು ರಾಜ್ಯ ವಕ್ಫ್ ಮತ್ತು ಹಜ್ ಸಚಿವ ಝಮೀರ್ ಅಹ್ಮದ್ ಖಾನ್ ಸವಾಲು ಹಾಕಿದ್ದಾರೆ.

ನಗರದ ಪಾಂಡೇಶ್ವರದಲ್ಲಿರುವ ಮೌಲಾನಾ ಆಝಾದ್ ಭವನಕ್ಕೆ ಗುರುವಾರ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ 685 ವಕ್ಫ್ ಆಸ್ತಿ ಸುಭದ್ರವಾಗಿದೆ. ಒಂದೆರಡು ಆಸ್ತಿಗಳ ಅತಿಕ್ರಮಣವಾಗಿದೆ. ಆ ಪೈಕಿ ಬಂದರ್‌ನಲ್ಲಿ 63 ಸೆಂಟ್ಸ್ ಜಮೀನನ್ನು ಬಿಜೆಪಿ ಮುಖಂಡ ರವಿಶಂಕರ್‌ಮಿಜಾರ್ ಅತಿಕ್ರಮಿಸಿ ಬೃಹತ್ ಕಟ್ಟಡ ನಿರ್ಮಿಸಿದ್ದಾರೆ. ಅದನ್ನು ವಕ್ಫ್ ಇಲಾಖೆಗೆ ಬಿಟ್ಟುಕೊಡುವಂತೆ ಮಂಗಳೂರು ಸಹಾಯಕ ಆಯುಕ್ತರ ನ್ಯಾಯಾಲಯ ಆದೇಶಿಸಿದೆ. ಅದನ್ನು ಪ್ರಶ್ನಿಸಿ ರವಿಶಂಕರ್ ಮಿಜಾರ್ ಹೈಕೋರ್ಟ್‌ನ ಮೊರೆ ಹೊಕ್ಕಿದ್ದಾರೆ. ಅನ್ವರ್ ಮಾಣಿಪ್ಪಾಡಿ ಈ ಜಿಲ್ಲೆಯವರು. ಅವರದೇ ಪಕ್ಷದ ಮುಖಂಡನೊಬ್ಬ ಆಸ್ತಿಯನ್ನು ಅತಿಕ್ರಮಿಸಿದ್ದಾರೆ. ಅವರಿಗೆ ವಕ್ಫ್ ಅತಿಕ್ರಮಣದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಮೊದಲು ರವಿಶಂಕರ್ ಮಿಜಾರ್‌ರಿಂದ ಆ ಅಸ್ತಿಯನ್ನು ವಕ್ಫ್‌ಗೆ ಮರಳಿಸುವ ಕೆಲಸ ಮಾಡಲಿ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

ಅನ್ವರ್ ಮಾಣಿಪ್ಪಾಡಿ ಆಯೋಗದ ಅಧ್ಯಕ್ಷರಾಗಿ 3 ವರ್ಷ ಅಧಿಕಾರದಲ್ಲಿದ್ದರು. 2012ರ ಫೆಬ್ರವರಿ 26ರಂದು ಅವರ ಅಧಿಕಾರವಧಿ ಮುಗಿದಿತ್ತು. ಅವರು ಅದರೊಳಗೆ ವಕ್ಫ್ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿ ಸಲ್ಲಿಸಬಹುದಿತ್ತು. ಆದರೆ, ಅವರು ಆ ಜವಾಬ್ದಾರಿಯನ್ನು ಆಗ ಮಾಡದೆ ಅಧಿಕಾರವಧಿ ಮುಗಿದ 1 ತಿಂಗಳ ಬಳಿಕ ಮಾಡಿದರು. ಆ ಬಳಿಕವೂ ಒಂದು ವರ್ಷ ಸದಾನಂದ ಗೌಡ ಮುಖ್ಯಮಂತ್ರಿಯಾಗಿದ್ದರು. ಆವಾಗ ಏನೂ ಮಾತನಾಡದ ಅನ್ವರ್ ಮಾಣಿಪ್ಪಾಡಿ ಬಳಿಕ ಬಂದ ಸರಕಾರದ ಮೇಲೆ ವಕ್ಫ್ ಅತಿಕ್ರಮಣದ ಕುರಿತು ಒತ್ತಡ ಹಾಕುವುದರಲ್ಲಿ ಅರ್ಥವಿಲ್ಲ. ಸಚಿವನಾದ ಬಳಿಕವೂ ನಾನು ಅವರನ್ನು ಒಂದೆರಡು ಬಾರಿ ಇದೇ ಬಗ್ಗೆ ಚರ್ಚಿಸಲು ಆಹ್ವಾನಿಸಿದೆ. ಆದರೆ, ಅವರು ಸ್ಪಂದಿಸಲಿಲ್ಲ. ಇನ್ನಾದರೂ ಸರಿ, ಅವರು ಅತಿಕ್ರಮಣಗೊಂಡ ವಕ್ಫ್ ಆಸ್ತಿಯನ್ನು ಮರಳಿಸಲು ಮುಂದಾಗಲಿ ಎಂದು ಝಮೀರ್ ಅಹ್ಮದ್ ನುಡಿದರಲ್ಲದೆ ರವಿಶಂಕರ್ ಮಿಜಾರು ವಕ್ಫ್ ಆಸ್ತಿ ಅತಿಕ್ರಮಣದಲ್ಲಿ ಅನ್ವರ್ ಮಾಣಿಪಾಡಿಯ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಿದರು. 

ಪ್ರಗತಿ ಪರಿಶೀಲನೆ: ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಝಮೀರ್ ಅಹ್ಮದ್ ಖಾನ್, ಶಾದಿಭಾಗ್ಯಕ್ಕೆ ಸಂಬಂಧಿಸಿ 70 ಲಕ್ಷ ರೂ. ಬಿಡುಗಡೆಗೆ ಆದೇಶಿಸಿದರು.

ಅಹವಾಲು ಸ್ವೀಕಾರ: ಈ ಸಂದರ್ಭ ಜಿಲ್ಲೆಯ ಮಸೀದಿ, ಮದ್ರಸ ಸಹಿತ ವಕ್ಫ್ ಸಂಸ್ಥೆಯ ನೂರಾರು ಮುಖಂಡರು ಅಹವಾಲು ಸಲ್ಲಿಸಿದರು.

ಸನ್ಮಾನ: ಇದೇ ವೇಳೆ ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಕಣಚೂರು ಮೋನು, ಉಪಾಧ್ಯಕ್ಷರಾದ ನೆಕ್ಕರೆ ಬಾವಾ, ಶಾಹುಲ್ ಹಮೀದ್, ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಯು.ಟಿ.ಇಫ್ತಿಕಾರ್ ಅಲಿ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ನೂರುದ್ದೀನ್ ಸಾಲ್ಮರ, ಡಿ.ಎಂ.ಅಸ್ಲಂ ಮತ್ತಿತರ ಸಮ್ಮುಖ ಸಚಿವ ಝಮೀರ್ ಅಹ್ಮದ್ ಖಾನ್‌ರನ್ನು ಸನ್ಮಾನಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News