ಬೀಡಿ ಸಿಗರೇಟ್ ಮಾರಾಟಕ್ಕೆ ಲೈಸನ್ಸ್: ಅ. 22ರಂದು ಸರಕಾರದ ತೀರ್ಮಾನದ ವಿರುದ್ಧ ಪ್ರತಿಭಟನೆ

Update: 2018-10-18 10:25 GMT

ಮಂಗಳೂರು, ಅ.18: ಪ್ರಸ್ತಾವಿತ ವಿಶೇಷ ಬೀಡಿ ಸಿಗರೇಟ್-ತಂಬಾಕು ಪದಾರ್ಥಗಳಿಗೆ ಲೈಸೆನ್ಸ್ ಪಡೆಯಬೇಕು ಎಂಬ ರಾಜ್ಯ ಸರಕಾರದ ಅವೈಜ್ಞಾನಿಕ ತೀರ್ಮಾನದ ವಿರುದ್ಧ ಮತ್ತು ವಿನಾಃಕಾರಣ ಪೊಲೀಸರು ಎಸಗುವ ದೌರ್ಜನ್ಯದ ವಿರುದ್ಧ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರನ್ನು ರಕ್ಷಿಸಲು ಒತ್ತಾಯಿಸಿ ಅ. 22ರಂದು ಅಪರಾಹ್ನ 2 ಗಂಟೆಗೆ ಮಿನಿವಿಧಾನ ಸೌಧದಿಂದ ಮೆರವಣಿಗೆ ಹೊರಟು 2:30ಕ್ಕೆ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ದ.ಕ. ಜಿಲ್ಲಾ ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಸುನೀಲ್ ಕುಮಾರ್ ಬಜಾಲ್, ಪ್ರಧಾನ ಕಾರ್ಯದರ್ಶಿ ಅಬೂಬಕರ್ ಕುದ್ರೋಳಿ ತಿಳಿಸಿದ್ದಾರೆ.

ದ.ಕ. ಜಿಲ್ಲಾದ್ಯಂತ 5,000ಕ್ಕೂ ಅಧಿಕ ಗೂಡಂಗಡಿದಾರರು ಚಿಲ್ಲರೆ ಬೀಡಿ ಸಿಗರೇಟ್ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನು ನಡೆಸುತ್ತಿದ್ದಾರೆ. ಆದರೆ ರಾಜ್ಯ ಸರಕಾರವು ಯಾವುದೇ ರೀತಿಯ ಕಾರಣಗಳನ್ನು ನೀಡದೆ ಗೂಡಂಗಡಿಗಳಲ್ಲಿ ಚಿಲ್ಲರೆಯಾಗಿ ಬೀಡಿ ಸಿಗರೇಟ್‌ಗಳನ್ನು ಮಾರಾಟ ಮಾಡಬಾರದು ಎಂದು ಕಟ್ಟಪ್ಪಣೆ ಹೊರಡಿಸಿದೆ. ಇದನ್ನೇ ನೆಪ ಮಾಡಿ ಪೊಲೀಸರು ಕಿರುಕುಳವನ್ನು ನೀಡಿ ದಂಡ ವಸೂಲಿ ಮಾಡಿ ಹಲ್ಲೆ ನಡೆಸುತ್ತಿದ್ದಾರೆ. ಅಲ್ಲದೆ ರಾಜ್ಯ ಸರಕಾರವು ಚಿಲ್ಲರೆ ಬೀಡಿ ಸಿಗರೇಟ್ ಮಾರಾಟಕ್ಕೆ ಸ್ಥಳೀಯ ಸಂಸ್ಥೆಗಳಿಂದ ಪ್ರತ್ಯೇಕ ಲೈಸನ್ಸ್ ಹೊಂದಿರಬೇಕೆಂಬ ಆದೇಶವನ್ನು ನೀಡಿರುವುದು ಕೂಡಾ ಅವೈಜ್ಞಾನಿಕವಾಗಿದೆ. ಈಗಾಗಲೇ ಗೂಡಂಗಡಿದಾರರು ಸ್ಥಳೀಯ ಸಂಸ್ಥೆಯಿಂದ ಲೈಸನ್ಸ್ ಹೊಂದಿರುತ್ತಾರೆ. ಈಗ ಮತ್ತೆ ಪ್ರತ್ಯೇಕವಾಗಿ ಲೈಸನ್ಸ್ ಪಡೆಯುವುದು ಎಷ್ಟು ಸರಿ ? ಎಂದು ಪ್ರಶ್ನಿಸಿರುವ ಸಂಘವು, ಒಟ್ಟಿನಲ್ಲಿ ಉದ್ದೇಶಿಸಿ ಸಿಗರೇಟ್ ಕಂಪೆನಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲು ಸಾಧ್ಯವಾಗದ ಸರಕಾರವು ಬಡ ಗೂಡಂಗಡಿದಾರರ ಮೇಲೆ ಕ್ರಮಕೈಗೊಳ್ಳುವ ಮೂಲಕ ತನ್ನ ಪೌರುಷವನ್ನು ತೋರಿಸುತ್ತಿದೆ ಎಂದು ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News