ಭಾರತದಲ್ಲಿ 50 ಕೋಟಿ ಮೊಬೈಲ್ ಫೋನ್ ಗಳ ಸಂಪರ್ಕ ಕಡಿತಗೊಳ್ಳಲಿದೆಯೇ ?

Update: 2018-10-18 13:11 GMT

ಹೊಸದಿಲ್ಲಿ, ಅ. 18: ಆಧಾರ್ ದಾಖಲೆಗಳ ಆಧಾರದಲ್ಲಿ ಒದಗಿಸಲಾದ ಮೊಬೈಲ್ ಫೋನ್ ಸಂಪರ್ಕಗಳನ್ನು ಕಡಿದು ಹಾಕಲಾಗುವುದಿಲ್ಲ ಎಂದು ಕೇಂದ್ರ ಸ್ಪಷ್ಟೀಕರಣ ನೀಡಿದೆ. ಭಾರತದ ಅರ್ಧದಷ್ಟು ಮೊಬೈಲ್ ಫೋನ್ ಸಂಪರ್ಕಗಳು ಅಂದರೆ ಸುಮಾರು 50 ಕೋಟಿ ಮೊಬೈಲ್ ಫೋನ್ ಸಂಪರ್ಕಗಳನ್ನು ಕಡಿದು ಹಾಕಲಾಗುವುದೆಂಬ ಕೆಲ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರದ ಈ ಸ್ಪಷ್ಟೀಕರಣ ಬಂದಿದೆ.

ಈ ವರದಿಗಳು ಸಂಪೂರ್ಣ ಸುಳ್ಳು ಮತ್ತು ಕಪೋಲಕಲ್ಪಿತ ಎಂದು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ ಹಾಗೂ ಟೆಲಿಕಮ್ಯುನಿಕೇಶನ್ಸ್ ಇಲಾಖೆ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.

''ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಎಲ್ಲಿಯೂ ಕೂಡ ಆಧಾರ್ ಇಕೆವೈಸಿ ಮೂಲಕ ಒದಗಿಸಲಾದ ಮೊಬೈಲ್ ಸಂಪರ್ಕಗಳನ್ನು ಕಡಿತಗೊಳಿಸಬೇಕೆಂದು ಹೇಳಲಾಗಿಲ್ಲ. ಜನರು ಭಯ ಪಡುವ ಅಗತ್ಯವೇ ಇಲ್ಲ, ಈ ವದಂತಿಗಳನ್ನು ನಂಬಬಾರದು'' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಿಶಿಷ್ಟ ಗುರುತು ಪ್ರಾಧಿಕಾರ ಅಥೆಂಟಿಕೇಶನ್ ಲಾಗ್ ಅನ್ನು ಆರು ತಿಂಗಳುಗಳಿಗಿಂತಲೂ ಹೆಚ್ಚು ಕಾಲ ಇಡಬಾರದು ಆದರೆ ಟೆಲಿಕಾಂ ಕಂಪೆನಿಗಳು  ಆಧಾರ್ ನಿಯಮಾವಳಿಗಳ ಪ್ರಕಾರ ಮಾಹಿತಿಯನ್ನು ತೆಗೆದಿರಿಸಿ ಅವುಗಳ ಮೂಲಕ ಗ್ರಾಹಕರ ಸಮಸ್ಯೆಗಳೇನಾದರೂ ಇದ್ದರೆ ಪರಿಹರಿಸಬೇಕು, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಯಾರಾದರೂ ತಮ್ಮ ಆಧಾರ್ ಇಕೆವೈಸಿಯ ಬದಲು ಹೊಸ ಕೆವೈಸಿ ನೀಡಬೇಕೆಂದು ಬಯಸಿದಲ್ಲಿ ಸೇವಾ ಪೂರೈಕೆದಾರರಿಗೆ ಮನವಿ ಸಲ್ಲಿಸಬಹುದು'' ಎಂದು ಹೇಳಿಕೆ ತಿಳಿಸಿದೆ.

ಆದರೆ ಹೊಸ ಸಿಮ್ ಕಾರ್ಡುಗಳನ್ನು ಆಧಾರ್ ಇಕೆವೈಸಿ ಮೂಲಕ ನೀಡುವ ಪ್ರಕ್ರಿಯೆಯನ್ನು ಉನ್ನತ ನ್ಯಾಯಾಲಯ ನಿಷೇಧಿಸಿದೆ ಎಂದೂ ವಿಶಿಷ್ಟ ಗುರುತು ಪ್ರಾಧಿಕಾರ ಹಾಗೂ ಟೆಲಿಕಮ್ಯೂನಿಕೇಶನ್ಸ್ ಇಲಾಖೆಯ ಹೇಳಿಕೆ  ವಿವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News