2020ರಲ್ಲಿ ಕೃತಕ ಚಂದ್ರನನ್ನು ಹೊಂದಲಿದೆ ಈ ನಗರ!

Update: 2018-10-18 15:32 GMT

ಬೀಜಿಂಗ್, ಅ.18: ಚೀನಾದ ಚೆಂಗ್ಡು ನಗರ ಇನ್ನು ಬೀದಿದೀಪಗಳ ಬದಲಿಗೆ ಕೃತಕ ಚಂದ್ರನ ಬೆಳಕು ಪ್ರಕಾಶಿಸಲಿದೆ. ಚಂದ್ರನ ಬೆಳದಿಂಗಳಿಗಿಂತ ಪ್ರಖರವಾದ ಕೃತಕ ಚಂದ್ರನ ಮೂಲಕ ನಗರಕ್ಕೆ ಬೆಳಕು ನೀಡಲು ಸರಕಾರ ಉದ್ದೇಶಿಸಿದೆ.

ಚೀನಾದ ನೈರುತ್ಯ ನಗರವಾದ ಚೆಂಗ್ಡು 2020ರಲ್ಲಿ ಈ ಮಿನುಗುವ ಉಪಗ್ರಹ ಉಡಾಯಿಸಲು ಸಿದ್ಧತೆ ಮಾಡಿಕೊಂಡಿದೆ. ಈ ಕೃತಕ ಚಂದ್ರನ ಬೆಳಕನ್ನು, ಸಹಜ ಚಂದ್ರನ ಬೆಳದಿಂಗಳಿಗೆ ಪೂರಕವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಚಂದ್ರನ ಬೆಳದಿಂಗಳಿಗಿಂತ ಎಂಟು ಪಟ್ಟು ಪ್ರಖರವಾಗಿರುತ್ತದೆ ಎಂದು ಅಧಿಕೃತ ಮಾಧ್ಯಮವಾದ ಪೀಪಲ್ಸ್ ಡೈಲಿ ವರದಿ ಮಾಡಿದೆ.

ಮುಸ್ಸಂಜೆಯಂತೆ ಹೊಳೆಯುವ ಈ ಉಪಗ್ರಹ 10ರಿಂದ 80 ಕಿಲೋಮೀಟರ್ ಪ್ರದೇಶಕ್ಕೆ ಬೆಳಕು ಬೀರಲಿದೆ. ಇದರಲ್ಲಿ ನಿಖರವಾದ ಹೊಳೆಯುವಿಕೆ ವಿಸ್ತಾರವನ್ನು 10 ಮೀಟರ್‍ಗಳ ನಿಖರತೆಗೆ ನಿಯಂತ್ರಿಸಲು ಅವಕಾಶವಿದ್ದು, ಬೀದಿ ದೀಪಗಳ ಬದಲು ಈ ಕೃತಕ ಚಂದ್ರನ ಬೆಳಕು ನಗರದಲ್ಲಿ ಕಂಗೊಳಿಸಲಿದೆ.

ಚೆಂಗ್ಡು ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಮೈಕ್ರೊ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ರೀಸರ್ಚ್ ಇನ್‍ಸ್ಟಿಟ್ಯೂಟ್‍ನ ಅಧ್ಯಕ್ಷ ವೂ ಚುನ್‍ಫೆಂಗ್ ಈ ವಿಶಿಷ್ಟ ಯೋಜನೆಯ ವಿವರ ನೀಡಿದ್ದಾರೆ. ಕಳೆದ ವಾರ ಚೆಂಗ್ಡು ನಗರದಲ್ಲಿ ನಡೆದ ರಾಷ್ಟ್ರೀಯ ಸಮೂಹ ಅನುಶೋಧನೆ ಮತ್ತು ಉದ್ಯಮಶೀಲತೆ ಕಾರ್ಯಕ್ರಮದಲ್ಲಿ ಈ ಬಗ್ಗೆ ಚುನ್ ಫೆಂಗ್ ವಿವರಿಸಿದರು.

ಇದರ ಪರೀಕ್ಷೆ ಒಂದು ವರ್ಷದ ಹಿಂದೆಯೇ ಆರಂಭವಾಗಿದೆ. ಇದೀಗ ತಂತ್ರಜ್ಞಾನ ಅಭಿವೃದ್ಧಿಯಾಗಿದ್ದು, ಉಪಗ್ರಹವನ್ನು 2020ರ ವೇಳೆಗೆ ಉಡಾಯಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News