‘ಮಿ ಟೂ’ ಚಳವಳಿ: ಇಬ್ಬರು ಪಾದ್ರಿಗಳ ವಿರುದ್ಧ ಮಹಿಳೆ ಆರೋಪ

Update: 2018-10-19 18:01 GMT

ಶಿಲ್ಲಾಂಗ್, ಅ. 19: ಸಾಮಾಜಿಕ ಜಾಲ ತಾಣದಲ್ಲಿ ‘ಮಿ ಟೂ’ ಅಭಿಯಾನದಲ್ಲಿ ಮಹಿಳೆಯೋರ್ವಳು ಶುಕ್ರವಾರ ಮೇಘಾಲಯದ ಪ್ರಮುಖ ಕೆಥೋಲಿಕ್ ಚರ್ಚ್‌ನ ಇಬ್ಬರ ಪಾದ್ರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ ಹಾಗೂ ಕೆಲವು ವರ್ಷಗಳ ಹಿಂದೆ ಅವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ 40ರ ಹರೆಯದ ಮಹಿಳೆ ತನ್ನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ತಾನು ಐದು ವರ್ಷದವಳಾಗಿದ್ದಾಗಲೇ ಕ್ರಿಶ್ಚಿಯನ್ ಬ್ರದರ್ಸ್‌ನ ಬ್ರದರ್ ಫ್ರಾನ್ಸಿಸ್ ಗಾಲೆ ಹಾಗೂ ಡಾನ್‌ಬಾಸ್ಕೋನ ಬ್ರದರ್ ಮಸ್ಕತ್ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಆಪ್ತ ಸಮಾಲೋಚನೆ ಮೂಲಕ ಆತ್ಮಹತ್ಯಾ ಪ್ರವೃತ್ತಿಯಿಂದ ಹೊರಬಂದಿರುವ ಮಹಿಳೆ, ತನ್ನ ಕುಟುಂಬದ ಬಡತನ ಚರ್ಚ್‌ನಲ್ಲಿ ಪಾದ್ರಿಗಳ ಲೈಂಗಿಕ ಕಿರುಕುಳದ ಬಲಿಪಶುವಾಗಲು ಕಾರಣವಾಯಿತು ಎಂದಿದ್ದಾರೆ.

ತಾನು 5 ವರ್ಷದವಳಿದ್ದಾಗಲೇ ಬ್ರದರ್ ಫ್ರಾನ್ಸಿಸ್ ಗಾಲೆ ಲೈಂಗಿಕ ಕಿರುಕುಳ ಆರಂಭಿಸಿದ್ದರು. ತಾನು ಈ ಬಗ್ಗೆ ಕುಟಂಬದ ಗಮನಕ್ಕೆ ತಂದಾಗ ಅವರು ಹೊಡೆದು ಗದರಿಸಿದರು ಎಂದಿದ್ದಾರೆ.

ತನಗೆ ಋತುಚಕ್ರ ಆರಂಭವಾದ 12ನೇ ವಯಸ್ಸಿನ ವರೆಗೆ ಅವರು ಲೈಂಗಿಕ ಕಿರುಕುಳ ನೀಡುವುದನ್ನು ಮುಂದುವರಿಸಿದ್ದರು. ತಾನು ಅನಂತರ ಗರ್ಭಿಣಿಯಾಗುವ ಭಯದಿಂದ ಅವರನ್ನು ಭೇಟಿಯಾಗುವುದನ್ನು ನಿರಾಕರಿಸುವ ಧೈರ್ಯ ತೋರಿದೆ ಎಂದು ಮಹಿಳೆ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಬ್ರದರ್ ಫ್ರಾನ್ಸಿಸ್ ಗಾಲೆ ಈಗ ಪಶ್ಚಿಮಬಂಗಾಳದಲ್ಲಿ ನೆಲೆಸಿದ್ದಾರೆ.

ಮಹಿಳೆ ತನ್ನ ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಇನ್ನೋರ್ವ ಪಾದ್ರಿ ಬ್ರದರ್ ಮಸ್ಕತ್. ಡಾನ್‌ಬಾಸ್ಕೋ ಗುಂಪಿನ ಪಾದ್ರಿಯಾಗಿರುವ ಅವರನ್ನು ಶಿಲ್ಲಾಂಗ್‌ನಲ್ಲಿ ನಿಯೋಜಿಸಲಾಗಿದೆ.

ತನ್ನ ಡೆಸ್ಕ್‌ನಲ್ಲಿ ಇರಿಸಿದ್ದ ಸಿಹಿತಿಂಡಿ ಹಾಗೂ ಟಾಫಿಯ ಆಮಿಷವೊಡ್ಡಿ ಅವರು ತನಗೆ ಲೈಂಗಿಕ ಕಿರುಕುಳ ನೀಡಿದರು. ಅವರು ಸಿಹಿತಿಂಡಿ ನೀಡುವುದಾಗಿ ತನ್ನನ್ನು ಟೇಬಲ್‌ನ ಹತ್ತಿರ ಕರೆಯುತ್ತಿದ್ದರು. ಅನಂತರ ತೊಡೆ ಸವರುತ್ತಿದ್ದರು ಎಂದು ಮಹಿಳೆ ಹೇಳಿದ್ದಾರೆ.

ತಾನು ಬ್ರದರ್ ಮಸ್ಕತ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಯಾರಲ್ಲೂ ಹೇಳಿಲ್ಲ. ಯಾಕೆಂದರೆ ಅದಕ್ಕಿಂತ ಹೆಚ್ಚು ಕಿರುಕುಳವನ್ನು ಬ್ರದರ್ ಫ್ರಾನ್ಸಿಸ್ ಗಾಲೆ ನೀಡಿದ್ದರು ಎಂದು ಮಹಿಳೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News