ಕೊಡಗಿನ ಸಂತ್ರಸ್ತರಿಗೆ ಕರ್ನಾಟಕ ಸುನ್ನಿ ಸಂಘಟನೆಗಳಿಂದ ಮನೆ ನಿರ್ಮಾಣ: ಅಹ್ಮದ್ ಸಖಾಫಿ

Update: 2018-10-20 08:39 GMT

ಕೊಣಾಜೆ, ಅ.20: ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ-ಮಠಗಳನ್ನು ಕಳೆದುಕೊಂಡಿರುವ ನಿರ್ವಸಿತರಿಗೆ ಮನೆ ನಿರ್ಮಿಸಿಕೊಡಲು ಕರ್ನಾಟಕ ಸುನ್ನಿ ಸಂಘಟನೆಗಳು ನಿರ್ಧರಿಸಿವೆ ಎಂದು ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ.ಅಹ್ಮದ್ ಸಖಾಫಿ ಕಾಶಿಪಟ್ನ ತಿಳಿಸಿದರು.

ಮಂಜನಾಡಿಯ ಅಲ್ ಮದೀನ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು. ಕೊಡಗಿನ ಪ್ರಮುಖ ಸುನ್ನೀ ಯುವ ನಾಯಕ ಅಬ್ದುಲ್ಲತೀಫ್ ಸುಂಠಿಕೊಪ್ಪ ಸಂತ್ರಸ್ತರಿಗಾಗಿ ಉದಾರವಾಗಿ ದಾನ ನೀಡಿರುವ ಒಂದು ಎಕರೆ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಸುಮಾರು 35 ಲಕ್ಷ ರೂ. ಸಂಗ್ರಹವಾಗಿದೆ. ಸರ್ಕಾರ ಹಾಗೂ ಇನ್ನಷ್ಟು ಉದಾರಿಗಳ ಸಹಾಯದಿಂದ 20ರಿಂದ 25 ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ ಎಂದರು.

ಉಲಮಾ ನಾಯಕರ ಕರೆಯ ಮೇರೆಗೆ ಎಸ್.ವೈ.ಎಸ್., ಎಸ್ಸೆಸ್ಸೆಪ್ ಮತ್ತು ಕೆಸಿಎಫ್ ಕಾರ್ಯಕರ್ತರು ಧನ ಸಂಗ್ರಹ ಮಾಡಿದ್ದಾರೆ. ಮುಅಲ್ಲಿಂ ಮತ್ತು ಮ್ಯಾನೇಜ್ಮೆಂಟ್ ನಾಯಕರೂ ಸಹಕರಿಸಿದ್ದಾರೆ. ಜಾತಿ ಮತ ಭೇದವಿಲ್ಲದೆ ಅರ್ಹ ಬಡ ಸಂತ್ರಸ್ತರನ್ನು ಗುರುತಿಸಿ ಮನೆಗಳನ್ನು ವಿತರಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಖಾಝಿ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಅಲ್ ಮದೀನ, ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಜೆ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಎಮ್ಮೆಸ್ಸೆಂ ಝೈನಿ ಕಾಮಿಲ್, ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಎಂ.ಬಿ.ಎ.ಸಾದಿಕ್ ಮಾಸ್ಟರ್, ಎನ್.ಕೆ.ಎಂ.ಶಾಫಿ ಸಅದಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News