‘ಮೀ ಟೂ’ ಆಂದೋಲನ ಒಳ್ಳೆಯದು, ಆದರೆ ದುರುಪಯೋಗ ಸಲ್ಲದು ಎಂದ ರಜನೀಕಾಂತ್
ಚೆನ್ನೈ,ಅ.20 : ‘ಮೀ ಟೂ’ ಆಂದೋಲನ ಮಹಿಳೆಯರ ಪಾಲಿಗೆ ಒಳ್ಳೆಯದು ಎಂದ ಖ್ಯಾತ ನಟ ರಜನೀಕಾಂತ್, ಅದೇ ಸಮಯ ಅದನ್ನು ಮಹಿಳೆಯರು ದುರುಪಯೋಗ ಪಡಿಸಬಾರದೆಂದು ಹೇಳಿದರು.
ತಮಿಳು ಗೀತ ರಚನೆಕಾರ ವೈರಮುತ್ತು ಅವರ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ರಜನೀಕಾಂತ್, ವೈರಮುತ್ತು ಈಗಾಗಲೇ ತಮ್ಮ ವಿರುದ್ಧದ ಆರೋಪ ನಿರಾಕರಿಸಿದ್ದಾರೆಂದರಲ್ಲದೆ ಆರೋಪ ಹೊರಿಸಿದವರು ಪ್ರಕರಣ ದಾಖಲಿಸಬೇಕು ಎಂದು ಸಲಹೆ ನೀಡಿದರು.
ತಮ್ಮ ಮುಂಬರುವ ಚಿತ್ರ `ಪೆಟ್ಟ' ಶೂಟಿಂಗ್ ಮುಗಿಸಿ ಚೆನ್ನೈಗೆ ಆಗಮಿಸಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ರಜನೀಕಾಂತ್, ತಾವು ತಮ್ಮ ಹುಟ್ಟು ಹಬ್ಬವಾದ ಡಿಸೆಂಬರ್ 12ರಂದು ತಮ್ಮ ಹೊಸ ಪಕ್ಷ ರಚಿಸಲಿದ್ದೇನೆಂಬ ಸುದ್ದಿಯನ್ನು ನಿರಾಕರಿಸಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವಾಗತಿಸಿದ ರಜನೀಕಾಂತ್ ಅದೇ ಸಮಯ ``ದೇವಸ್ಥಾನದ ಐತಿಹಾಸಿಕ ಪರಂಪರೆಯನ್ನು ಅನುಸರಿಸಿ ಗೌರವಿಸಬೇಕು,'' ಎಂದು ಹೇಳಿದರು.