ಎನ್‍ಡಿಟಿವಿ ವಿರುದ್ಧದ ಮಾನನಷ್ಟ ಪ್ರಕರಣ-ಮಾಧ್ಯಮ ಸ್ವಾತಂತ್ರ್ಯದ ಮೇಲೆ ದಾಳಿ : ಪತ್ರಕರ್ತರ ರಕ್ಷಣಾ ಸಮಿತಿ

Update: 2018-10-20 13:08 GMT

ಮುಂಬೈ,ಅ.20 : ಸುದ್ದಿ ವಾಹಿನಿ ಎನ್‍ಡಿಟಿವಿ ವಿರುದ್ಧ  ರೂ 10,000 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಸಮೂಹವನ್ನು ಪತ್ರಕರ್ತರ ರಕ್ಷಣಾ ಸಮಿತಿ ಖಂಡಿಸಿದೆಯಲ್ಲದೆ ತನ್ನನ್ನು ಟೀಕಿಸುವ ಸುದ್ದಿ ಸಂಸ್ಥೆಗಳ ವಿರುದ್ಧ ಇಂತಹ ಮಾನನಷ್ಟ ಪ್ರಕರಣಗಳನ್ನು ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ. ರಾಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಎನ್‍ಡಿಟಿವಿ ಸೆಪ್ಟೆಂಬರ್ 29ರಂದು ಪ್ರಸಾರ ಮಾಡಿದ `ಟ್ರುತ್ ವರ್ಸಸ್ ಹೈಪ್'  ಕಾರ್ಯಕ್ರಮದ  ಹಿನ್ನೆಲೆಯಲ್ಲಿ ಮಾನನಷ್ಟ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಅಕ್ಟೋಬರ್ 26ರಂದು ಕೈಗೆತ್ತಿಕೊಳ್ಳಲಿದೆ.

ಈ ಮಾನನಷ್ಟ ಪ್ರಕರಣವು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಸಮಿತಿಯ ಏಷ್ಯಾ ಪ್ರೊಗ್ರಾಂ ಕೊ-ಆರ್ಡಿನೇಟರ್ ಸ್ಟೀವನ್ ಬಟ್ಲರ್ ಹೇಳಿದ್ದಾರೆ. ತನ್ನ ಟೀಕಾಕಾರರ ಸದ್ದಡಗಿಸಲು ಕಾನೂನು ವ್ಯವಸ್ಥೆಯನ್ನು ಪ್ರಭಾವಿ ಉದ್ಯಮ ಸಂಸ್ಥೆಗಳು ದುರ್ಬಳಕೆ ಮಾಡದಂತೆ ನ್ಯಾಯಾಂಗ ನೋಡಿಕೊಳ್ಳಬೇಕೆಂದು ಸಮಿತಿ ಹೇಳಿದೆ.

ಪ್ರಕರಣದ ಬಗ್ಗೆ ತನ್ನ ಪ್ರತಿಕ್ರಿಯೆ ನೀಡಲು ರಿಲಯನ್ಸ್ ನಿರಾಕರಿಸಿದೆ ಎಂದು ಸಮಿತಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News