ದೇವಸ್ಥಾನದ ಸಂಪ್ರದಾಯಗಳಲ್ಲಿ ಯಾರೂ ಹಸ್ತಕ್ಷೇಪ ಮಾಡಕೂಡದು: ರಜನಿ

Update: 2018-10-20 13:44 GMT

ಚೆನ್ನೈ,ಅ.20: ಎಲ್ಲ ವಯೋಮಾನಗಳ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನದಲ್ಲಿ ಪ್ರವೇಶಾವಕಾಶ ಕಲ್ಪಿಸಿರುವ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪು ಮತ್ತು ಅದನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಮೊದಲ ಬಾರಿ ಪ್ರತಿಕ್ರಿಯಿಸಿರುವ ನಟ ರಜನಿಕಾಂತ್ ಅವರು,ಹಿಂದಿನಿಂದಲೂ ಪಾಲಿಸಲಾಗುತ್ತಿರುವ ದೇವಸ್ಥಾನದ ಸಂಪ್ರದಾಯಗಳಲ್ಲಿ ಹಸ್ತಕ್ಷೇಪ ಕೂಡದು ಎಂದು ಹೇಳಿದ್ದಾರೆ.

ಶನಿವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರತಿಯೊಂದೂ ಕ್ಷೇತ್ರದಲ್ಲಿ ಮಹಿಳೆಯರಿಗೆ ಸಮಾನತೆ ದೊರೆಯಬೇಕು ಎನ್ನುವ ಬಗ್ಗೆ ಬೇರೆ ಮಾತೇ ಇಲ್ಲ. ಆದರೆ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರತಿಯೊಂದೂ ದೇವಸ್ಥಾನವು ತನ್ನದೇ ಆದ ವಿಧಿಗಳನ್ನು ಹೊಂದಿದೆ ಮತ್ತು ಬಹು ಹಿಂದಿನಿಂದಲೂ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಕೂಡದು ಎನ್ನುವುದು ತನ್ನ ನಮ್ರ ವಿನಂತಿ ಎಂದು ಹೇಳಿದರು.

ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಲೇಬೇಕು ಎಂದ ಅವರು, ಆದರೆ ಧಾರ್ಮಿಕ ವಿಷಯಗಳು ಮತ್ತು ಸಂಬಂಧಿತ ವಿಧಿಗಳ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,ತನ್ನ ನೂತನ ಪಕ್ಷಕ್ಕೆ ಸಂಬಂಧಿಸಿದಂತೆ ಶೇ.90ರಷ್ಟು ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಸೂಕ್ತ ಸಮಯದಲ್ಲಿ ನೂತನ ಪಕ್ಷವನ್ನು ಘೋಷಿಸುವುದಾಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News