×
Ad

​ಅ. 22ರಿಂದ ಸುರತ್ಕಲ್ ಟೋಲ್‌ಗೇಟ್ ಮುಚ್ಚಲು ಆಗ್ರಹಿಸಿ ಧರಣಿ

Update: 2018-10-20 19:06 IST

ಮಂಗಳೂರು, ಅ.20: ಟೋಲ್‌ಗೇಟ್ ಮುಚ್ಚುವ ರಾಜ್ಯ ಸರಕಾರದ ಪ್ರಸ್ತಾಪ, ನಾಗರಿಕರ ಸತತ ಹೋರಾಟದ ಹೊರತಾಗಿಯೂ ಸುರತ್ಕಲ್ ಅಕ್ರಮ ಟೋಲ್‌ಗೇಟ್ ಸುಂಕ ಸಂಗ್ರಹದ ಗುತ್ತಿಗೆ ನವೀಕರಣದ ಟೆಂಡರ್ ಕರೆದಿರುವ, ಕೂಳೂರು ಹಳೆ ಸೇತುವೆಯನ್ನು ಪರ್ಯಯ ವ್ಯವಸ್ಥೆ ಇಲ್ಲದೆ ಮುಚ್ಚುವ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಖಂಡಿಸಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸುರತ್ಕಲ್ ಅ.22ರಿಂದ ಸುರತ್ಕಲ್ ಜಂಕ್ಷನ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಯಲಿದೆ.

ಅ.30ಕ್ಕೆ ಟೋಲ್‌ ಸಂಗ್ರಹದ ಗುತ್ತಿಗೆಯ ಅವಧಿ ಮುಕ್ತಾಯಗೊಳ್ಳುತ್ತಿದ್ದು ಆ ನಂತರ ಟೋಲ್ ಗುತ್ತಿಗೆಯನ್ನು ನವೀಕರಿಸುವುದಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ಸಂಸದರು ಭರವಸೆ ನೀಡಿದ್ದರು. ಆದರೆ ಈಗ ಮತ್ತೊಮ್ಮೆ ಟೋಲ್‌ಗುತ್ತಿಗೆ ನವೀಕರಿಸುವ ಟೆಂಡರ್ ಪ್ರಕ್ರಿಯೆಗೆ ಹೆದ್ದಾರಿ ಪ್ರಾಧಿಕಾರ ಚಾಲನೆ ನೀಡಿದೆ. ಆ ಮೂಲಕ ಅಕ್ರಮ ಟೋಲ್‌ಗೇಟ್ ಮುಂದುವರಿಸಲು ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಪ್ರಕ್ರಿಯೆಗೆ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಕಾರಣ ಎಂದು ಹೋರಾಟ ಸಮಿತಿ ಆರೋಪಿಸಿದೆ.

ಈಗಾಗಲೆ ಅನಿರ್ಧಿಷ್ಟಾವಧಿ ಧರಣಿಗೆ ಕಾಂಗ್ರೆಸ್, ಜೆಡಿಎಸ್, ಸಿಪಿಎಂ ಪಕ್ಷಗಳು, ಪಂಪ್‌ವೆಲ್, ಹೆಜಮಾಡಿ, ಬೆಳ್ಮಣ್, ತಲಪಾಡಿಯ ಹೆದ್ದಾರಿ ಹೋರಾಟ ಸಮಿತಿಗಳು, ಡಿವೈಎಫ್‌ಐ, ಡಿಎಸ್‌ಎಸ್, ಜಯಕರ್ನಾಟಕ ಸಂಘಟನೆಗಳು, ಬಸ್ ಮಾಲಕರ ಸಂಘ, ಲಾರಿ ಮಾಲಕರ ಒಕ್ಕೂಟ, ಸ್ಥಳೀಯ ಟೆಂಪೊ, ಟ್ಯಾಕ್ಸಿ ಚಾಲಕರ ಎಸೋಸಿಯೇಶನ್‌ಗಳು, ಹಳೆಯಂಗಡಿ, ಮುಲ್ಕಿ, ಕಿನ್ನಿಗೋಳಿ, ಕಾಟಿಪಳ್ಳ, ಕುಳಾಯಿ, ಕೃಷ್ಣಾಪುರ, ಸುರತ್ಕಲ್, ಬೈಕಂಪಾಡಿ, ಹೆಜಮಾಡಿ ಭಾಗದ ಸ್ಥಳೀಯ ಸಂಘ ಸಂಸ್ಥೆಗಳು, ಸಾಮಾಜಿಕ ಮುಖಂಡರು, ಮನಪಾ ಸದಸ್ಯರು, ತಾಲೂಕು, ಗ್ರಾಪಂ ಸದಸ್ಯರು ಬೆಂಬಲ ಘೋಷಿಸಿದ್ದಾರೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News