ಎಸ್‌ಸಿಎಸ್ ಆಸ್ಪತ್ರೆಯಲ್ಲಿ ನೂತನ ಚಿಕಿತ್ಸಾಲಯ ಉದ್ಘಾಟನೆ
ಮಂಗಳೂರು, ಅ. 20: ನಗರದ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಜಠರ, ಕರುಳು, ಪಿತ್ತಜನಕಾಂಗ, ಮೇಧೋಜೀರಕ ಗ್ರಂಥಿಗೆ ಸಂಬಂಧಿಸಿದ ನೂತನ ಚಿಕಿತ್ಸಾಲಯವನ್ನು ಶುಕ್ರವಾರ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ನೂತನ ಆವಿಷ್ಕಾರಗಳಿಂದಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವಿನೂತನ ಬದಲಾವಣೆಗಳಾಗುತ್ತಿವೆ. ವೈಜ್ಞಾನಿಕ ಉಪಕರಣಗಳ ಹೆಚ್ಚಳದಿಂದಾಗಿ ಯಾವುದೇ ಆರೋಗ್ಯ ಸಮಸ್ಯೆಯನ್ನೂ ಗುಣಪಡಿಸಬಲ್ಲ ಶಕ್ತಿಯನ್ನು ವೈದ್ಯಕೀಯ ರಂಗ ಪಡೆದುಕೊಂಡಿದೆ ಎಂದರು.
ಜಠರಕ್ಕೆ ಸಂಬಂಧಿಸಿದ ತೊಂದರೆಗಳ ಚಿಕಿತ್ಸೆಗೆ ರೋಗಿಗಳು ದೂರದ ಬೆಂಗಳೂರು, ಮುಂಬಯಿಗೆ ಹೋಗಬೇಕಾಗಿತ್ತು. ಆದರೆ ಇದೀಗ ಈ ರೋಗದ ಚಿಕಿತ್ಸೆಗೂ ನಗರದಲ್ಲಿ ಸೌಲಭ್ಯ ದೊರಕಿದೆ. ಮಂಗಳೂರು ಆರೋಗ್ಯ ವಲಯದಲ್ಲಿ ಇದೊಂದು ಮಹತ್ವದ ದಿನವಾಗಿದೆ ಎಂದು ಸ್ವಾಮಿ ಜಿತಕಾಮಾನಂದಜಿ ಅಭಿಪ್ರಾಯಪಟ್ಟರು.
ಅಂತಾರಾಷ್ಟ್ರೀಯ ಮಟ್ಟದ ತರಬೇತುದಾರ ವಿಜಯ್ ಮೆನನ್ ಮಾತನಾಡಿ, ಚಿಕಿತ್ಸೆ ಬಯಸಿ ಬರುವ ರೋಗಿಗೆ ವೈದ್ಯಕೀಯ ವಿಜ್ಞಾನಾಧರಿತವಾಗಿ ಸೇವೆ ನೀಡುವುದೇ ನಿಜವಾದ ವೈದ್ಯನ ಕರ್ತವ್ಯ. ಅಂತಹ ಸೇವೆ ಎಸ್‌ಸಿಎಸ್ ಆಸ್ಪತ್ರೆಯಲ್ಲಿ ಲಭಿಸುತ್ತಿದೆ. ನೂತನವಾಗಿ ಲೋಕಾರ್ಪಣೆಗೊಂಡ ವಿಭಾಗದಲ್ಲಿಯೂ ರೋಗಿಗಳಿಗೆ ಉನ್ನತ ಮಟ್ಟದ ವೈದ್ಯಕೀಯ ಸೇವೆ ಲಭಿಸುವಂತಾಗಲಿದೆ ಎಂದು ಹಾರೈಸಿದರು.
ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ, ಶಾಸಕ ಡಿ. ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿದ್ದರು. ಆಸ್ಪತ್ರೆಯ ಎಂಡಿ ಮತ್ತು ಅಧ್ಯಕ್ಷ ಡಾ. ಜೀವರಾಜ್ ಸೊರಕೆ ಉಪಸ್ಥಿತರಿದ್ದರು.
ವೈದ್ಯ ಡಾ. ಚಂದ್ರಶೇಖರ್ ಸೊರಕೆ ಸ್ವಾಗತಿಸಿದರು. ಕವಿತಾ ಶಾಸಿ ನಿರೂಪಿಸಿದರು.