ಅ.26ರಂದು ‘ಕೋರಿ-ರೊಟ್ಟಿ’ ತುಳು ಚಲನಚಿತ್ರ ಬಿಡುಗಡೆ

Update: 2018-10-20 16:03 GMT

ಉಡುಪಿ, ಅ.20: ರಾಕೆಟ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ‘ಕೋರಿ-ರೊಟ್ಟಿ’ ತುಳು ಚಲನಚಿತ್ರವು ಅ.26ರಂದು ಉಡುಪಿ ಹಾಗೂ ದ.ಕ. ಜಿಲ್ಲೆಯಾದ್ಯಂತ ಒಟ್ಟು 12 ಚಿತ್ರ ಮಂದಿರ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ಸಹ ನಿರ್ಮಾಪಕ ಅನ್ಸಾರ್ ಅಹ್ಮದ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಟುಂಬಿಕ ಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ಹಾಸ್ಯ, ಸಸ್ಪೆನ್ಸ್ ಹಾಗೂ ಮನೋರಂಜನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಈ ಚಿತ್ರವನ್ನು ರಜನೀಶ್ ನಿರ್ದೇಶಿಸಿ, ಸ್ವತಃ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಖ್ಯಾತ ಟಿವಿ ನಿರೂಪಕಿ ಅನುಶ್ರೀ ನಾಯಕಿ ನಟಿಯಾಗಿದ್ದಾರೆ. ತುಳುನಾಡಿನ ಹಾಸ್ಯ ದಿಗ್ಗಜರಾದ ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು ಹಾಗೂ ಅರವಿಂದ ಬೋಳಾರ್ ಪ್ರೇಕ್ಷಕರಿಗೆ ಹಾಸ್ಯ ರಸದೌತಣ ಉಣಬಡಿಸಲಿದ್ದಾರೆ. ಹರೀಶ್ ರೈ ಖಳನಟರಾಗಿ ಅಭಿನಯಿಸಿದ್ದಾರೆ ಎಂದರು.

ಚಿತ್ರದಲ್ಲಿ ಮೂರು ಹಾಡುಗಳಿದ್ದು, ಒಂದು ಹಾಡನ್ನು ಉತ್ತರ ಕರ್ನಾಟಕದ ಜಾನಪದ ಗೀತೆಯನ್ನು ತುಳುವಿಗೆ ಭಾಷಾಂತರಿಸಲಾಗಿದೆ. ಚಿತ್ರಕ್ಕೆ ಸುಬ್ಬಯ್ಯ ಕುಟ್ಟಪ್ಪಛಾಯಾಗ್ರಹಣ, ತಮಿಳಿನ ವಿಕ್ರಂ ಸೆಲ್ವಂ ಸಂಗೀತ ನೀಡಿದ್ದಾರೆ. ವಿಜಯಕುಮಾರ್ ರೈ ಸಂಕಲನ, ಭರತ್ ಕುಮಾರ್ ಹಾಗೂ ಕೃಷ್ಣದಾಸ್ ಸಾಹಿತ್ಯ ಬರೆದಿದ್ದಾರೆ. ಅ.26ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಜ್ಯೋತಿ ಹಾಗೂ ಉಡುಪಿಯ ಕಲ್ಪನಾ ಚಿತ್ರಮಂದಿರಗಳಲ್ಲಿ ಚಿತ್ರದ ಉದ್ಘಾಟನೆ ನಡೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಚಿತ್ರದ ಧ್ವನಿ ಸುರಳಿ ಹಾಗೂ ಟ್ರೈಲರ್‌ನ್ನು ಬಿಡುಗಡೆಗೊಳಿ ಸಲಾಯಿತು. ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಮಹಮ್ಮದ್ ಇರ್ಫಾನ್, ನಿರ್ದೇಶಕ ರಜನೀಶ್, ಭರತ್ ಕುಮಾರ್, ಅನ್ವರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News