ಇಕ್ವೆಡಾರ್ ಸರಕಾರದ ವಿರುದ್ಧ ಅಸಾಂಜ್ ಮೊಕದ್ದಮೆ: ಮೂಲಭೂತ ಹಕ್ಕುಗಳ ಉಲ್ಲಂಘನೆ ಆರೋಪ

Update: 2018-10-20 17:19 GMT

ಕ್ವಿಟೊ (ಇಕ್ವೆಡಾರ್), ಅ. 20: ತನ್ನ ಮೂಲಭೂತ ಹಕ್ಕುಗಳನ್ನು ಇಕ್ವೆಡಾರ್ ಸರಕಾರ ಉಲ್ಲಂಘಿಸುತ್ತಿದೆ ಹಾಗೂ ಹೊರಜಗತ್ತಿನೊಂದಿಗಿನ ತನ್ನ ಸಂಪರ್ಕವನ್ನು ಸೀಮಿತಗೊಳಿಸಿದೆ ಎಂದು ಆರೋಪಿಸಿ ಲಂಡನ್‌ನಲ್ಲಿರುವ ಇಕ್ವೆಡಾರ್‌ನ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಿರುವ ವಿಕಿಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಆ ದೇಶದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

ಆಸ್ಟ್ರೇಲಿಯನ್ ಪ್ರಜೆ ಅಸಾಂಜ್‌ಗೆ ನೀಡಿರುವ ಆಶ್ರಯವನ್ನು ಹಿಂದಕ್ಕೆ ಪಡೆಯುವ ಮೂಲಕ ಬ್ರಿಟಿಶ್ ಸರಕಾರದೊಂದಿಗಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಇಕ್ವೆಡಾರ್ ಮುಂದಾಗಿದೆ ಎಂಬ ಊಹಾಪೋಹಗಳ ನಡುವೆ ಈ ಬೆಳವಣಿಗೆ ಸಂಭವಿಸಿದೆ.

ಲೈಂಗಿಕ ದೌರ್ಜನ್ಯ ಮೊಕದ್ದಮೆ ಎದುರಿಸಲು ಅಸಾಂಜ್‌ರನ್ನು ಸ್ವೀಡನ್‌ಗೆ ಗಡಿಪಾರು ಮಾಡಬೇಕು ಎಂಬುದಾಗಿ ಬ್ರಿಟಿಶ್ ನ್ಯಾಯಾಲಯವೊಂದು 2012ರಲ್ಲಿ ತೀರ್ಪು ನೀಡಿದ ಬಳಿಕ, ಅಸಾಂಜ್ ಇಕ್ವೆಡಾರ್ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆದಿದ್ದಾರೆ.

 ಈ ಆ ಮೊಕದ್ದಮೆಯನ್ನು ಕೈಬಿಡಲಾಗಿದೆಯಾದರೂ, ಅಮೆರಿಕ ಸರಕಾರದ ಗೌಪ್ಯ ದಾಖಲೆಗಳನ್ನು ವಿಕಿಲೀಕ್ಸ್ ವೆಬ್‌ಸೈಟ್ ಮೂಲಕ ಬಹಿರಂಗಪಡಿಸಿರುವುದಕ್ಕಾಗಿ ತನ್ನನ್ನು ಅಮೆರಿಕಕ್ಕೆ ಗಡಿಪಾರು ಮಾಡಬಹುದು ಎಂಬ ಭೀತಿಯನ್ನು ಅಸಾಂಜ್ ಹೊಂದಿದ್ದಾರೆ.

ಅಸಾಂಜ್‌ರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಉಲ್ಲಂಘಿಸಿರುವುದಕ್ಕಾಗಿ ಇಕ್ವೆಡಾರ್ ಸರಕಾರದ ವಿರುದ್ಧ ಮೊಕದ್ದಮೆ ಹೂಡಿರುವುದಾಗಿ ವಿಕಿಲೀಕ್ಸ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News