ಅಮೃತಸರ ರೈಲು ದುರಂತ: ಗಾಯಾಳುಗಳ ಸುಲಿಗೆ, ಮೃತರ ವಸ್ತುಗಳನ್ನೂ ಬಿಡದ ಡಕಾಯಿತರು

Update: 2018-10-21 07:52 GMT

ಅಮೃತಸರ,ಅ.21: ಅಮೃತಸರದಲ್ಲಿ ನಡೆದ ರೈಲು ದುರಂತದಲ್ಲಿ ಗಾಯಗೊಂಡು ನರಳುತ್ತಿದ್ದವರ ವಸ್ತುಗಳನ್ನು ದೋಚಿರುವ ಅಮಾನವೀಯ ಕೃತ್ಯ ನಡೆದಿದೆ. ಮೃತಪಟ್ಟವರ ವಸ್ತುಗಳನ್ನೂ ಬಿಡದಂತೆ ದೋಚಿರುವ ಸುಲಿಗೆಕೋರರ ಕೃತ್ಯಕ್ಕೆ ಇಡೀ ಮನುಕುಲವೇ ಬೆಚ್ಚಿಬಿದ್ದಿದೆ.

ರೈಲು ಹರಿದು ಗಾಯಗೊಂಡವರು ಅಸಹಾಯಕರಾಗಿ ನೆರವಿಗೆ ಯಾಚಿಸುತ್ತಿದ್ದರೆ, ಇನ್ನೊಂದೆಡೆ ಕಳ್ಳರು ಗಾಯಾಳುಗಳ ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಘಟನೆಯಲ್ಲಿ 61 ಮಂದಿ ಮೃತಪಟ್ಟರು 143 ಮಂದಿ ಗಾಯಗೊಂಡಿದ್ದರು. ತಮ್ಮ ಸಂಬಂಧಿಕರ ಮೃತದೇಹಗಳನ್ನು ತರಲು ಹೋಗಿದ್ದಾಗ, ಅಮೂಲ್ಯ ಚಿನ್ನಾಭರಣಗಳು, ಮೊಬೈಲ್ ಹಾಗೂ ಪರ್ಸ್‍ಗಳನ್ನು ಲೂಟಿ ಮಾಡಲಾಗಿದೆ ಎಂದು ಮೃತರ ಸಂಬಂಧಿಕರು ಮತ್ತು ಗಾಯಾಳುಗಳು ದೂರಿದ್ದಾರೆ.

"ಆಡಳಿತ ಯಂತ್ರದ ವೈಫಲ್ಯದಿಂದಾಗಿ ಮತ್ತು ಸಂಘಟಕರ ಬೇಜವಾಬ್ದಾರಿತನದಿಂದಾಗಿ ನಾನು ನನ್ನ ಮಗನನ್ನು ಕಳೆದುಕೊಳ್ಳಬೇಕಾಯಿತು. ಆತನ ದೇಹ ಸಿವಿಲ್ ಆಸ್ಪತ್ರೆಯಲ್ಲಿ ಸಿಕ್ಕಿತು. ಆದರೆ 20 ಸಾವಿರ ಮೌಲ್ಯದ ಮೊಬೈಲ್, ಪರ್ಸ್ ಹಾಗೂ ಚಿನ್ನದ ಸರ ನಾಪತ್ತೆಯಾಗಿದೆ" ಎಂದು ಘಟನೆಯಲ್ಲಿ ಮೃತಪಟ್ಟ ವಾಸು (17) ಎಂಬ ಯುವಕನ ತಾಯಿ ಜ್ಯೋತಿ ಕುಮಾರಿ ರೋಧಿಸುತ್ತಿದ್ದರು.

ಕಮಲ್ ಕುಮಾರ್ ಹಾಗೂ ಅವರ ಮಗ ತರುಣ್ ಮಖಾನ್ (19) ಕೂಡಾ ದಸರಾ ವೀಕ್ಷಿಸಲು ಸ್ನೇಹಿತರ ಜತೆ ತೆರಳಿದ್ದರು. "ಅಪಘಾತದ ಬಳಿಕ ಸ್ನೇಹಿತರು ತರುಣ್‍ನ ದೇಹವನ್ನು ಗಾಡಿಯಲ್ಲಿ ಮನೆಗೆ ತಂದರು. ಆದರೆ ಆತನ ಮೊಬೈಲ್ ನಾಪತ್ತೆಯಾಗಿದೆ" ಎಂದು ಕಮಲ್ ಕುಮಾರ್ ದೂರುತ್ತಾರೆ.

ಮೂರು ವರ್ಷದ ಪುತ್ರಿ ನಂದಿನಿಯನ್ನು ಅಪಘಾತದಲ್ಲಿ ಕಳೆದುಕೊಂಡು ತೀವ್ರ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿರುವ ದೀಪಕ್ ಹೇಳುವಂತೆ, "ನಾನು ಮಗ ಹಾಗೂ ಮಗಳ ಜತೆ ದಸರಾ ವೀಕ್ಷಿಸಲು ಹೋಗಿದ್ದೆ. ನಾನು ಮಗಳನ್ನು ಕಳೆದುಕೊಂಡೆ. ಮಗ ಜೀವನ್ಮರಣ ಹೋರಾಟದಲ್ಲಿದ್ದಾನೆ. ನಾನು ನೆರವಿಗೆ ಯಾಚಿಸುತ್ತಿದ್ದರೆ, ಕೆಲವರು ನನ್ನ ಜೇಬಿನಿಂದ ಮೊಬೈಲ್ ಕಿತ್ತುಕೊಂಡರು".

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News