ಬಂಟ್ವಾಳ: ಎರಡು ಮನೆಗಳಿಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Update: 2018-10-21 07:56 GMT

ಬಂಟ್ವಾಳ, ಅ. 21: ಎರಡು ಮನೆಗಳ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ನಗ-ನಗದು ಕಳವು ಮಾಡಿದ ಘಟನೆ ಇರ್ವತ್ತೂರು ಎಂಬಲ್ಲಿ ಶನಿವಾರ ತಡರಾತ್ರಿ ನಡೆದಿದೆ. ‌

ಇಲ್ಲಿನ ನಿವಾಸಿ ಹಸನಬ್ಬ ಹಾಗೂ ಯೂಸುಫ್ ಎಂಬವರಿಗೆ ಸೇರಿದ ಮನೆಗಳಿಂದ ಈ ಕೃತ್ಯ ನಡೆದಿದೆ.

ಮನೆಮಂದಿಯಿರುವಾಗಲೇ ಹಸನಬ್ಬ ಅವರ ಎರಡು ಅಂತಸ್ತಿನ ಮನೆಯ ಮೇಲಿನ  ಹಿಂಬದಿ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು, ಕೋಣೆಯ ಒಳಗಿನ ಕಪಾಟಿನಲ್ಲಿದ್ದ ಸುಮಾರು 40 ಪವನ್ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಹಸನಬ್ಬ ಅವರ ಮಗಳನ್ನು ಮಡಂತ್ಯಾರು‌ ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿತ್ತು.  ಆಕೆಯ ಪತಿ ವಿದೇಶದಲ್ಲಿದ್ದು, ಮಕ್ಕಳಿಗೆ ರಜೆ ಇದ್ದ ಕಾರಣ ತಂದೆ ಮನೆಗೆ ಬಂದಿದ್ದರು ಎನ್ನಲಾಗಿದೆ. ಈಕೆಯ ಚಿನ್ನಾಭರಣಗಳನ್ನು ಕಪಾಟಿನಲ್ಲಿಟ್ಟಿದ್ದು ಕಳವಾಗಿದೆ ಎಂದು ಹೇಳಲಾಗುತ್ತಿದೆ.

ಅದೇ ರೀತಿ ಇವರ ಸಮೀಪದ ಯೂಸುಫ್ ಎಂಬವರ ಮನೆಯ ಹಿಂಬದಿಯಿಂದ ನುಗ್ಗಿದ ಕಳ್ಳರು ಮನೆಮಂದಿ ನಿದ್ರೆಯಲ್ಲಿದ್ದಾಗಲೇ ತಮ್ಮ ಕೈಚಳಕ ತೋರಿಸಿ, ಕಪಾಟಿನಲ್ಲಿದ್ದ ಸುಮಾರು 55 ಸಾವಿರ ರೂ. ನಗದು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ‌.

ಬಂಟ್ವಾಳ ಎಎಸ್ಪಿ ಸೊನಾವಣೆ ಋಷಿಕೇಶ್ ಭಗವಾನ್, ಬೆಳ್ತಂಗಡಿ ಸಿಐ ಸಂದೇಶ್ ಹಾಗೂ ಪುಂಜಾಲಕಟ್ಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News