ಅಮೃತಸರ ರೈಲು ದುರಂತ: ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು

Update: 2018-10-21 14:07 GMT

ಅಮೃತಸರ, ಅ.21: ವಿಜಯದಶಮಿ ದಿನದಂದು 60ಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ರೈಲು ದುರಂತ ನಡೆದ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ಲಾಠಿಚಾರ್ಜ್ ನಡೆಸಿ ಚದುರಿಸಿದರು ಎಂದು ವರದಿಯಾಗಿದೆ.

   ದುರಂತದಲ್ಲಿ ಮೃತಪಟ್ಟವರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ದುರಂತದ ಬಳಿಕ ಹಲವರು ನಾಪತ್ತೆಯಾಗಿದ್ದು ಅವರನ್ನು ಪತ್ತೆಹಚ್ಚಬೇಕು ಎಂದು ಆಗ್ರಹಿಸಿ ಪ್ರತಿಭಟನಾಕಾರರು ಘೋಷಣೆ ಕೂಗುತ್ತಿದ್ದರು. ರೈಲ್ವೇ ಹಳಿಯ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದವರನ್ನು ಲಾಠಿಬೀಸಿ ಪೊಲೀಸರು ಚದುರಿಸಿದರು. ಈ ಸಂದರ್ಭ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದಾಗ ಪೊಲೀಸ್ ಸಿಬ್ಬಂದಿ ಸಹಿತ ಹಲವರು ಗಾಯಗೊಂಡರು ಎಂದು ಮೂಲಗಳು ತಿಳಿಸಿವೆ. ತನ್ನ ಮನೆ ಬಳಿಯ ನಿವಾಸಿಗಳಾದ ಇಬ್ಬರು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂದು ಕಮಲ್ ಎಂಬ ಸ್ಥಳೀಯ ವ್ಯಕ್ತಿ ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸರಕಾರ ಘೋಷಿಸಿದ್ದಕ್ಕಿಂತಲೂ ಅಧಿಕವಾಗಿದೆ ಎಂದವರು ಹೇಳಿದ್ದಾರೆ.

ಶನಿವಾರ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಅಮರೀಂದರ್ ಸಿಂಗ್ , ದುರಂತದಲ್ಲಿ 59 ಮಂದಿ ಮೃತಪಟ್ಟಿದ್ದು 57 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ರಾಜೇಶ್ ಶರ್ಮ ಮೃತಪಟ್ಟವರ ಸಂಖ್ಯೆ 61 ಎಂದು ಹೇಳಿರುವುದನ್ನು ಇಲ್ಲಿ ಗಮನಿಸಬಹುದು.

ದುರಂತದಲ್ಲಿ ಮೃತಪಟ್ಟ ತನ್ನ ತಂದೆಯ ಮೃತದೇಹ ಇನ್ನೂ ದೊರೆತಿಲ್ಲ ಎಂದು ರಾಜು ಎಂಬ ಮತ್ತೊಬ್ಬ ಸ್ಥಳೀಯ ವ್ಯಕ್ತಿ ತಿಳಿಸಿದ್ದಾರೆ. ದುರಂತದಲ್ಲಿ ಮೃತಪಟ್ಟ ತಂದೆಯ ಮೃತದೇಹವನ್ನು ಅಲ್ಲಿಯೇ ಬಳಿಯಲ್ಲಿರಿಸಿ ಬಿಳಿಬಟ್ಟೆಯೊಂದನ್ನು ತರಲೆಂದು ಸಮೀಪದಲ್ಲಿದ್ದ ಮನೆಗೆ ಹೋಗಿದ್ದೆ. ವಾಪಾಸು ಬಂದಾಗ ಮೃತದೇಹ ನಾಪತ್ತೆಯಾಗಿದೆ ಎಂದವರು ಹೇಳಿದ್ದಾರೆ. ತನ್ನ ಕುಟುಂಬದ ನಾಲ್ವರು ನಾಪತ್ತೆಯಾಗಿರುವುದಾಗಿ ಮತ್ತೊಬ್ಬ ಸ್ಥಳೀಯರು ದೂರಿದ್ದಾರೆ. ಮತ್ತೊಬ್ಬ ವ್ಯಕ್ತಿಯಂತೂ ತನ್ನ ಸಹೋದರನ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಸಹೋದರನನ್ನು ಪತ್ತೆಹಚ್ಚುವಂತೆ ಪೊಲೀಸರಲ್ಲಿ ಗೋಗರೆಯುತ್ತಿರುವ ದೃಶ್ಯ ಕರುಣಾಜನಕವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News