‘ಮೀ ಟೂ’ ಉರುಳು: ಇಂಡಿಯನ್ ಐಡಲ್‍ನಿಂದ ಅನು ಮಲಿಕ್ ಔಟ್
ಮುಂಬೈ,ಅ.21: ನಾಲ್ವರು ಮಹಿಳೆಯರು ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ಖ್ಯಾತ ಸಂಗೀತ ಸಂಯೋಜಕ ಅನು ಮಲಿಕ್ ಅವರು ಜನಪ್ರಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ತೀರ್ಪುಗಾರ ಹುದ್ದೆ ತ್ಯಜಿಸಿದ್ದಾರೆ.
ಈ ಕುರಿತು ಸೋನಿ ಎಂಟರ್‍ಟೈನ್‍ಮೆಂಟ್ ಟಿವಿ ಅಧಿಕೃತ ಹೇಳಿಕೆ ನೀಡಿದೆ. ದೇಶಾದ್ಯಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ‘ಮೀ ಟೂ’ ಅಭಿಯಾನದಲ್ಲಿ ಹಲವು ಮಂದಿ ಮಹಿಳೆಯರು ಅನು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಪ್ರದರ್ಶನದ ಇತರ ಇಬ್ಬರು ತೀರ್ಪುಗಾರರಾದ ವಿಶಾಲ್ ದದ್ಲಾನಿ ಮತ್ತು ನೇಹಾ ಕಕ್ಕರ್ ಅವರ ಜತೆಗೆ ಮತ್ತೊಬ್ಬ ತೀರ್ಪುಗಾರರನ್ನು ಸದ್ಯವೇ ಪ್ರಕಟಿಸುವುದಾಗಿ ಸೋನಿ ಪ್ರಕಟಣೆ ಹೇಳಿದೆ.
"ಅನು ಮಲಿಕ್ ಅವರು ಇಂಡಿಯನ್ ಐಡಲ್ ತೀರ್ಪುಗಾರರಾಗಿ ಮುಂದುವರಿಯುವುದಿಲ್ಲ. ಆದರೆ ಈ ರಿಯಾಲಿಟಿ ಶೋ ನಿಗದಿತ ವೇಳಾಪಟ್ಟಿಯಂತೆ ಮುಂದುವವರಿಯಲಿದೆ. ಇಂಡಿಯನ್ ಐಡಲ್‍ನ 10ನೇ ಸೀಸನ್‍ನ ಅದ್ಭುತ ಪ್ರತಿಭೆಗಳನ್ನು ಗುರುತಿಸಲು ಭಾರತೀಯ ಸಂಗೀತ ಲೋಕದ ಖ್ಯಾತನಾಮರೊಬ್ಬರನ್ನು ನಾವು ತೀರ್ಪುಗಾರರಾಗಿ ಆಹ್ವಾನಿಸಲಿದ್ದೇವೆ" ಎಂದು ಪ್ರಕಟಣೆ ತಿಳಿಸಿದೆ.
ಈ ರಿಯಾಲಿಟಿ ಶೋದಿಂದ ಹೊರಗೆ ಉಳಿಯುದಾಗಿ ಮಲಿಕ್ ಕೂಡಾ ಹೇಳಿಕೆ ನೀಡಿದ್ದಾರೆ. ಈ ಶೋಗೆ ಸಂಬಂಧಿಸಿದಂತೆ ನನ್ನ ಕಾರ್ಯದ ಮೇಲೆ ಗಮನ ಹರಿಸಲು ನನಗೆ ಪ್ರಸ್ತುತ ಸಾಧ್ಯವಾಗುತ್ತಿಲ್ಲ. ಚಾನೆಲ್ ಕೂಡಾ ಇದಕ್ಕೆ ಒಪ್ಪಿಗೆ ನೀಡಿದೆ. ಧನ್ಯವಾದಗಳು ಎಂದು ಅವರು ವಿವರಿಸಿದ್ದಾರೆ. ಗಾಯಕಿ ಸೋನಾ ಮೊಹಾಪಾತ್ರ ಮತ್ತು ಶ್ವೇತಾ ಪಂಡಿತ್ ಅವರು ಮಲಿಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಬಳಿಕ ಇಬ್ಬರು ಉದಯೋನ್ಮುಖ ಗಾಯಕಿಯರು ಕೂಡಾ ಇಂಥದ್ದೇ ಆರೋಪ ಮಾಡಿದ್ದರು.