ಕಾರಾಜೆ-ಕೊಳಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆ-ಒಳಚರಂಡಿ ಕಾಮಗಾರಿ ಅವೈಜ್ಞಾನಿಕ

Update: 2018-10-21 10:16 GMT

► ಅಪಾಯಕಾರಿ ಮಿದ್ಯುತ್ ಕಂಬವನ್ನು ತೆರವುಗೊಳಿಸದೆ ಕಾಮಗಾರಿ ಪ್ರಕ್ರಿಯೆ!

► ಒಳಚರಂಡಿಯಲ್ಲಿಯೇ ಕುಡಿಯುವ ನೀರಿನ ಹೊಸ ಪೈಪ್‌ಲೈನ್ ಅಳವಡಿಕೆ!

ಬಂಟ್ವಾಳ, ಅ. 20: ಕಾರಾಜೆ-ಕೊಳಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಯು ಅವ್ಯವಸ್ಥೆಯಿಂದ ಕೂಡಿದ್ದು, ಅವೈಜ್ಞಾನಿಕವಾಗಿದೆ. ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿರುವ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೆ ಕಾಮಗಾರಿ ಪ್ರಕ್ರಿಯೆ ನಡೆಯುತ್ತಿದ್ದು, ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ಸಜಿಪಮೂಡ ಗ್ರಾಮಸ್ಥರು ಆರೋಪಿಸಿದ್ದರೆ.

 ಈ ಒಳ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕರ ವಿಶೇಷ ಅನುದಾನ ಮಂಜುರಾತಿಯಾಗಿದ್ದು, ಇಲ್ಲಿನ ರಸ್ತೆ ಹಾಗೂ ಸಮರ್ಪಕ ಒಳಚರಂಡಿ ಸೇರಿ ಕಾಮಗಾರಿಗಾಗಿ ಸುಮಾರು 2.50ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಕಾರಾಜೆ, ಕುಚ್ಚಿಗುಡ್ಡೆ, ಮಿತ್ತಮಜಲು, ಕಾಂತಾಡಿ, ಕೂಡೂರು ಮಾರ್ಗವಾಗಿ ಕೊಳಕೆಯನ್ನು ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದರ ಕಾಮಗಾರಿ ಅವ್ಯವಸ್ಥೆ ಹಾಗೂ ಅವೈಜ್ಞಾನಿಕವಾಗಿದೆ ಎಂದು ಎಸ್‌ಡಿಪಿಐ ಬಂಟ್ವಾಳ ಸಮಿತಿಯ ಸದಸ್ಯ ಮಲಿಕ್ ದೂರಿದ್ದಾರೆ.

ರಸ್ತೆ ಹಾಗೂ ಒಳಚರಂಡಿ ನಿರ್ಮಾಣ ಕಾರ್ಯದಲ್ಲಿ ಯಾವುದೇ ರೂಪುರೇಷೆ ಮಾಡಿಲ್ಲ. ಅಲ್ಲದೆ, ರಸ್ತೆ-ಒಳಚರಂಡಿ ಕಾಮಗಾರಿಗೂ ಮೊದಲು ರಸ್ತೆಯ ಇಕ್ಕೆಲಗಳಲ್ಲಿರುವ ಸುಮಾರು 27 ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವು ಮಾಡಿ ಎಂದು ನಿರ್ದೇಶನ ನೀಡಲಾಗಿತ್ತು. ಆದರೆ, ಕಾಮಗಾರಿ ಗುತ್ತಿಗೆದಾರರು ವಿದ್ಯುತ್ ಕಂಬಗಳಿರುವ ಸ್ಥಳದಲ್ಲೇ ಒಳಚರಂಡಿ ನಿರ್ಮಿಸಿದ್ದಾರೆ. ಇಲ್ಲಿನ ಕೆಲ ವಿದ್ಯುತ್ ಕಂಬಗಳು ಬೀಳುವ ಪರಿಸ್ಥಿಯಲ್ಲಿದ್ದರೂ ಪಿಡಬ್ಲ್ಯೂಡಿ ಅಧಿಕಾರಿಗಳು ನಿರ್ಲಕ್ಷ ಧೋರಣೆಯನ್ನು ಅನುಸರಿಸುತ್ತಿದ್ದಾರೆ ಎಂದು ಮಲಿಕ್ ಆರೋಪಿಸಿದ್ದಾರೆ.

ವಿದ್ಯುತ್ ಕಂಬಗಳ ತೆರವಿಗೆ ನಿರ್ದೇಶನವಿದ್ದರೂ, ಅಪಾಯಕಾರಿ ವಿದ್ಯುತ್ ಕಂಬ ತೆರವು ಮಾಡದೆ ಇರುವುದಕ್ಕೆ ಮೆಸ್ಕಾಂ ಇಲಾಖೆಯನು ಪ್ರಶ್ನಿಸಿದರೆ ಕಾಮಗಾರಿ ಮೇಲ್ವಿಚಾರಕರಲ್ಲಿ ತಿಳಿಸುವಂತೆ ತಾತ್ಸ್ಸಾರದ ಮಾತುಗಳು ಕೇಳಿಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಸ್ತೆ ನಿರ್ಮಾಣದ ವಿಸ್ತೀರ್ಣ ಅಪೂರ್ಣ:

ಸುಮಾರು 2.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ, ಒಳಚರಂಡಿ ಕಾಮಗಾರಿಯ ವಿಸ್ತೀರ್ಣ ಅಪೂರ್ಣವಾಗಿದೆ. 4.350 ಕಿ. ಮೀಟರ್ ರಸ್ತೆಯ ವಿಸ್ತೀರ್ಣವನ್ನು ಹೊದಿದ್ದರೂ ಕೇವಲ 3ಕಿ.ಮೀ. ನಷ್ಟು ರಸ್ತೆ ನಿರ್ಮಾಣ ಮಾಡಲಾಗಿದೆ. ಅದಲ್ಲದೆ ಒಳಚರಂಡಿ ಕೂಡ ಕಡಿಮೆ ವಿಸ್ತೀರ್ಣವನ್ನು ಹೊಂದಿದೆ ಎಂಬ ಆರೋಪಕೇಳಿ ಬಂದಿದೆ.

ಈ ಬಗ್ಗೆ ಗ್ರಾಮ ಪಂಚಾಯತ್, ಪಿಡಿಒ ಹಾಗೂ ವಾರ್ಡ್ ಸದಸ್ಯರಲ್ಲೂ ಮಾಹಿತಿ ನೀಡಿ, ವೌಖಿಕವಾಗಿ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಇಲ್ಲಿನ ಪಂಚಾಯತ್ ಸದಸ್ಯರು ಇತ್ತ ಸುಳಿಯಲೇ ಇಲ್ಲ. ಅಂಗನವಾಡಿ ಸಮೀಪವಿರುವ ವಿದ್ಯುತ್ ಕಂಬ ಬೀಳುವ ಸ್ಥಿತಿಯಲ್ಲಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳೇ ಹೊಣೆ. ಒಂದು ವಾರದೊಳಗೆ ಅಪಾಯಕಾರಿ ವಿದ್ಯುತ್ ಕಂಬಗಳನ್ನು ತೆರವುಗೊಳಿಸದೇ ಇದ್ದಲ್ಲಿ, ಎಸ್‌ಡಿಪಿಐ ಬಂಟ್ವಾಳ ಕ್ಷೇತ್ರ ಹಾಗೂ ಸಜಿಪಮೂಡ ಗ್ರಾಮಸ್ಥರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಲಿದ್ದಾರೆ.

ಮಲಿಕ್, ಎಸ್‌ಡಿಪಿಐ ಬಂಟ್ವಾಳ ಸಮಿತಿ ಸದಸ್ಯ

ಒಳಚರಂಡಿಯಲ್ಲೇ ಕುಡಿಯುವ ನೀರಿನ ಪೈಪ್‌ಲೈನ್

ಒಳಚರಂಡಿ ಕಾಮಗಾರಿಯು ಪ್ರಾರಂಭವಾಗಿದ್ದು, ಈ ಚರಂಡಿಯೊಳಗೆಯೇ ಕುಡಿಯುವ ನೀರಿನ ಹೊಸ ಪೈಪ್‌ಲೈನ್ ಹಾದುಹೋಗಿದೆ. ಅಲ್ಲದೆ, ಚರಂಡಿಯಲ್ಲಿಯೇ ನೀರಿನ ಗೇಟ್‌ಬಾಲ್ ಅನ್ನು ಅಳವಡಿಸಲಾಗಿದೆ. ಕೆಲವೆಡೆ ಪೈಪ್ ಒಡೆದು ಹೋಗಿದ್ದು, ಗ್ರಾಮಸ್ಥರು ರೋಗದ ಭೀತಿ ಎದುರಿಸುವಂತಾಗಿದೆ. ಇದರಿಂದ ಒಳಚರಂಡಿಯಲ್ಲಿ ಅಳವಡಿಸಿರುವ ಪೈಪ್‌ಲೈನ್ ಅನ್ನು ತೆರವುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - -ಅಬ್ದುಲ್ ರಹ್ಮಾನ್ ತಲಪಾಡಿ

contributor

Editor - -ಅಬ್ದುಲ್ ರಹ್ಮಾನ್ ತಲಪಾಡಿ

contributor

Similar News