ಶಬರಿಮಲೆ ವಿಷಯದಿಂದ ಗಮನ ಬೇರೆಡೆ ಸೆಳೆಯಲು ತನ್ನ ವಿರುದ್ಧ ದೂರು: ಉಮ್ಮನ್ ಚಾಂಡಿ

Update: 2018-10-21 15:43 GMT

ತಿರುವನಂತಪುರ,ಅ.21: ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಸಲ್ಲಿಸಿರುವ ಲೈಂಗಿಕ ದುರ್ವರ್ತನೆ ದೂರಿನ ಮೇರೆಗೆ ಕೇರಳ ಪೊಲೀಸ್‌ನ ಕ್ರೈಂ ಬ್ರಾಂಚ್ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಮತ್ತು ಸಂಸದ ಕೆ.ಸಿ.ವೇಣುಗೋಪಾಲ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಂಡಿದೆ.

ಇಲ್ಲಿ ಸುದ್ದಿಗಾರರಿಗೆ ಈ ವಿಷಯವನ್ನು ದೃಢಪಡಿಸಿದ ಡಿಜಿಪಿ ಲೋಕನಾಥ ಬೆಹೆರಾ ಅವರು,ಕಾನೂನು ತನ್ನದೇ ದಾರಿಯಲ್ಲಿ ಸಾಗಲಿದೆ ಎಂದರು.

ಪ್ರಕರಣಗಳ ತನಿಖೆಗಾಗಿ ಎಸ್‌ಪಿ ಅಬ್ದುಲ್ ಕರೀಂ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವೊಂದನ್ನು ರಚಿಸಲಾಗಿದೆ ಎಂದೂ ಅವರು ತಿಳಿಸಿದರು.

ಈ ಬೆಳವಣಿಗೆಗೆ ಪ್ರತಿಕ್ರಿಯುಸಿದ ಚಾಂಡಿ,ಪ್ರಕರಣಗಳನ್ನು ಕಾನೂನುಬದ್ಧವಾಗಿ ಎದುರಿಸಲು ತಾವು ಸಿದ್ಧರಿದ್ದೇವೆ ಎಂದು ಹೇಳಿದರು. ಇವು ರಾಜಕೀಯವಾಗಿ ಪ್ರೇರಿತ ಪ್ರಕರಣಗಳು ಎಂದು ಹೇಳಿದ ಅವರು,ಈಗ ಪ್ರಕರಣಗಳನ್ನು ದಾಖಲಿಸುವ ಮೂಲಕ ರಾಜ್ಯದ ಸಿಪಿಎಂ ನೇತೃತ್ವದ ಸರಕಾರವು ಜನರ ಗಮನವನ್ನು ಶಬರಿಮಲೆ ವಿವಾದದಿಂದ ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದೆ ಎಂದರು.

ಚಾಂಡಿ ಅವರು 2012ರಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ಕ್ಲಿಫ್ ಹೌಸ್’ನಲ್ಲಿ ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದರು ಮತ್ತು ವೇಣುಗೋಪಾಲ ಅವರು ಆಗಿನ ರಾಜ್ಯ ಸಚಿವ ಎ.ಪಿ.ಅನಿಲಕುಮಾರ್ ಅವರ ನಿವಾಸದಲ್ಲಿ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಸರಿತಾ ನಾಯರ್ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ.

 ನಾಯರ್ ಮತ್ತು ಬಿಜು ರಾಧಾಕೃಷ್ಣನ್ ಸೌರ ಫಲಕಗಳನ್ನು ಒದಗಿಸುವುದಾಗಿ ಹೇಳಿ ಹಲವಾರು ಜನರಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿದ್ದು ಬಹಿರಂಗಗೊಂಡಾಗ ಹಿಂದಿನ ಯುಡಿಎಫ್ ಸರಕಾರವು ವಿಚಾರಣೆಗಾಗಿ ಜಿ.ಶಿವರಾಜನ್ ಆಯೋಗವನ್ನು ರಚಿಸಿತ್ತು. ಕಳೆದ ವರ್ಷದ ನ.9ರಂದು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಆಯೋಗದ ವರದಿಯು ಚಾಂಡಿ ಮತ್ತು ಅವರ ನಾಲ್ವರು ಖಾಸಗಿ ಸಿಬ್ಬಂದಿಗಳು ಗ್ರಾಹಕರನ್ನು ವಂಚಿಸಲು ನಾಯರ್ ಮತ್ತು ಆಕೆಯ ಕಂಪನಿ ಟೀಂ ಸೋಲಾರ್‌ಗೆ ನೆರವಾಗಿತ್ತು ಎನ್ನುವುದನ್ನು ಬೆಟ್ಟು ಮಾಡಿತ್ತು. ವರದಿಯು ಚಾಂಡಿ ಸೇರಿದಂತೆ ವಿವಿಧ ಕಾಂಗ್ರೆಸ್ ಮತ್ತು ಯುಡಿಎಫ್ ನಾಯಕರ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪಗಳನ್ನು ಹೊರಿಸಿ ನಾಯರ್ 2013,ಜು.19ರಂದು ಪೊಲೀಸ್ ಆಯುಕ್ತರಿಗೆ ಬರೆದಿದ್ದ ಪತ್ರದ ವಿವರಗಳನ್ನೂ ಒಳಗೊಂಡಿತ್ತು.

ವರದಿಯಲ್ಲಿನ ತನ್ನ ವಿರುದ್ಧದ ಆರೋಪಗಳನ್ನು ರದ್ದುಗೊಳಿಸುವಂತೆ ಕೋರಿ ಚಾಂಡಿ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ್ದ ಕೇರಳ ಉಚ್ಚ ನ್ಯಾಯಾಲಯವು ನಾಯರ್ ಪತ್ರವನ್ನು ಆಧರಿಸಿ ಅವರ ವಿರುದ್ಧ ಆಯೋಗವು ಬೆಟ್ಟು ಮಾಡಿದ್ದ ಅಂಶಗಳನ್ನು ಅಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News