ಎನ್‌ಐಎ ಪಟ್ಟಿ ಬಿಡುಗಡೆ : ಕಡಬದ ಜಯಪ್ರಕಾಶ್ 'ಮೋಸ್ಟ್ ವಾಂಟೆಡ್'
ಕಡಬ, ಅ.21. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 258 ಮಂದಿ ಮೋಸ್ಟ್ ವಾಂಟೆಡ್ ಆರೋಪಿಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಗೋವಿಂದ ಪನ್ಸಾರೆ ಹತ್ಯೆ, ಮಾಲೆಂಗಾವ್ ಸ್ಫೋಟ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿ, ಸನಾತನ ಸಂಸ್ಥಾದಲ್ಲಿ ಗುರುತಿಸಿಕೊಂಡಿದ್ದ ಕಡಬದ ಜಯಪ್ರಕಾಶ್ ಅಲಿಯಾಸ್ ಅಣ್ಣಾ(47)ನ ಹೆಸರು ಕೂಡಾ ಸೇರಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಟ್ಟತ್ತಡ್ಕ ನಿವಾಸಿ ಸೋಮರಾಜನ್ ಎಂಬವರ ಪುತ್ರ ಜಯಪ್ರಕಾಶ್ ಅಲಿಯಾಸ್ ಅಣ್ಣಾ, ಗೋವಾದ ಮಡಂಗಾವ್ ಎಂಬಲ್ಲಿ 2009ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿ ಆ ಬಳಿಕ ತಲೆಮರೆಸಿಕೊಂಡಿದ್ದಾನೆ. ವೃತ್ತಿಯಲ್ಲಿ ಇಲೆಕ್ಟ್ರಿಷಿಯನ್ ಆಗಿದ್ದ ಜಯಪ್ರಕಾಶ್ ಬಳಿಕ ಮುಲ್ಕಿಯಲ್ಲಿ ಸನಾತನ ಸಂಸ್ಥಾದ ವಾಹನದಲ್ಲಿ ಚಾಲಕನಾಗಿದ್ದ ಎನ್ನಲಾಗಿದೆ. ಬೆಳ್ತಂಗಡಿ ತಾಲೂಕು ಕಕ್ಕಿಂಜೆ ತೋಟತ್ತಾಡಿಯಿಂದ ಮದುವೆಯಾಗಿದ್ದ ಈತನಿಗೆ ಒಂದು ಮಗು ಕೂಡ ಇದೆಯೆನ್ನಲಾಗಿದೆ. ಆ ನಂತರ ಊರು ಬಿಟ್ಟಿದ್ದ ಈತ ಮನೆಯವರ ಸಂಪರ್ಕಕ್ಕೂ ಸಿಗದೆ, ಸದ್ಯ ಈನ ಬಗ್ಗೆ ಯಾರಿಗೂ ಮಾಹಿತಿ ಇಲ್ಲವಾಗಿದೆ.
2013ರ ಸೆಪ್ಟಂಬರ್ 18ರಂದು ಹೈದರಾಬಾದ್‌ನಿಂದ ಕಡಬಕ್ಕೆ ಆಗಮಿಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು ಜಯಪ್ರಕಾಶ್ ಭಾವಚಿತ್ರದ ಪೋಸ್ಟರ್‌ಗಳನ್ನು ಕಂದಾಯ ಇಲಾಖೆಯ ಗೋಡೆಗೆ ಹಚ್ಚಿ ಮಹಜರು ನಡೆಸಿದ್ದರು.
ಲಿಸ್ಟ್‌ನಲ್ಲಿ 258 ಮಂದಿ
ಎನ್‌ಐಎ ಶನಿವಾರ ಪ್ರಕಟಿಸಿದ ಪಟ್ಟಿಯಲ್ಲಿ ಒಟ್ಟು 258 ಮಂದಿ ಹೆಸರುಗಳಿದ್ದು, ಅವರಲ್ಲಿ 15 ಮಂದಿ ಮಹಿಳೆಯರು. ಎನ್‌ಐಎ ಪಟ್ಟಿಯಲ್ಲಿರುವ 57 ಮಂದಿಯ ತಲೆಗೆ ಬಹುಮಾನ ಘೋಷಿಸಲಾಗಿದೆ. ನಿಷೇಧಿತ ಮಾವೋವಾದಿ ಗುಂಪಿನ ಉನ್ನತ ನಾಯಕರಲ್ಲೊಬ್ಬನಾದ ಮುಪಲ್ಲಾ ಲಕ್ಷ್ಮಣ್‌ರಾವ್‌ನ ತಲೆಗೆ ಗರಿಷ್ಠ 15 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಆತನ ಸಂಭಾವ್ಯ ಉತ್ತರಾಧಿಕಾರಿಯೆನ್ನಲಾದ ನಂಬಾಲ ಕೇಶವ ರಾವ್ ಯಾನೆ ಬಸವರಾಜ್ ಕೂಡಾ ಪಟ್ಟಿಯಲ್ಲಿದ್ದು, ಆತನ ತಲೆಗೆ 10 ಲಕ್ಷ ರೂ. ಘೋಷಿಸಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆಯು ಲಷ್ಕರೆ ಉಗ್ರ ಸಂಘಟನೆಯ ಮುಖ್ಯಸ್ಥ ರಹ್ಮಾನ್ ಲಖ್ವಿ, ಹಫೀಝ್ ಸೈಯದ್ ಸಹಿತ ಹಲವರ ಹೆಸರನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆಗೊಳಿಸಿದೆ.ಅವರಲ್ಲಿ ಹೆಚ್ಚಿನವರಿಗೆ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ. ಈ ಹೆಸರುಗಳನ್ನು ಎನ್‌ಐಎ ವೆಬ್‌ಸೈಟ್ ಹಾಗೂ ಟ್ವಿಟರ್ ಅಕೌಂಟ್‌ನಲ್ಲಿ ಫೋಟೊ ಸಮೇತ ಪೋಸ್ಟ್ ಮಾಡಿದೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಸುಳಿವು ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪಟ್ಟಿಯಲ್ಲಿರುವವರಲ್ಲಿ 15 ಮಂದಿ ಪಾಕಿಸ್ತಾನದವರಾಗಿದ್ದಾರೆ. ಇವರ ಪೈಕಿ ಹಿಜ್ಬುಲ್ ಉಗ್ರ ಜುನೈದ್ ಅಕ್ರಂ ಮಲಿಕ್‌ನ ತಲೆಗೆ ಎನ್‌ಐಎ 10 ಲಕ್ಷ ರೂ. ಬಹುಮಾನ ಪ್ರಕಟಿಸಿದೆ. ಸಿಬಿಐ, ಎನ್‌ಐಎ ಹಾಗೂ ಗುಪ್ತಚರ ದಳ (ಐಬಿ) ಹಾಗೂ ವಿವಿಧ ಕಾನೂನು ಅನುಷ್ಠಾನ ಸಂಸ್ಥೆಗಳ ಸಮಾಲೋಚನೆಯೊಂದಿಗೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.