ಸೇನಾ ಶಿಬಿರದ ಮೇಲೆ ದಾಳಿ ಪ್ರಕರಣ: ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Update: 2018-10-21 13:38 GMT

ಹೊಸದಿಲ್ಲಿ, ಅ.21: 2016ರಲ್ಲಿ ಜಮ್ಮುವಿನ ನಗ್ರೋಟದಲ್ಲಿ ಸೇನಾ ಶಿಬಿರದ ಮೇಲೆ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಬಂಧಿಸಿದೆ. ಈತ ಶ್ರೀಲಂಕಾಕ್ಕೆ ತೆರಳುವ ಪ್ರಯತ್ನದಲ್ಲಿದ್ದಾಗ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು-ಕಾಶ್ಮೀರದ ಪುಲ್ವಾಮದ ನಿವಾಸಿ ಅಶ್ರಫ್ ಖಾಂಡೆ ಎಂಬಾತ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಶಾಮೀಲಾಗಿದ್ದ ಎನ್ನಲಾಗಿದ್ದು ಘಟನೆಯ ಬಳಿಕ ಈತ ತಲೆಮರೆಸಿಕೊಂಡಿದ್ದ. ಶನಿವಾರ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಈತನನ್ನು ಭದ್ರತಾ ಪಡೆಗಳು ಬಂಧಿಸಿವೆ. ಈತ ಶ್ರೀಲಂಕಾಕ್ಕೆ ಪರಾರಿಯಾಗಲು ಯೋಜನೆ ಹಾಕಿಕೊಂಡಿದ್ದ. 2016ರ ನವೆಂಬರ್ 29ರಂದು ಸೇನಾ ಶಿಬಿರದ ಮೇಲೆ ನಡೆದಿದ್ದ ದಾಳಿಯಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ಏಳು ಯೋಧರು ಮೃತಪಟ್ಟಿದ್ದರು. ಪಾಕ್‌ನಿಂದ ಗಡಿದಾಟಿ ಬರುವ ಉಗ್ರರನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ಕಾರ್ಯವನ್ನು ಅಶ್ರಫ್ ನಿರ್ವಹಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಸೇನಾ ನೆಲೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದ ಜೈಷೆ ಮುಹಮ್ಮದ್ ಸಂಘಟನೆಯ ಕಾರ್ಯಕರ್ತ ಮುನೀರ್ ಖಾದ್ರಿಯನ್ನು ಮೇ ತಿಂಗಳಲ್ಲಿ ಭದ್ರತಾ ಪಡೆಗಳು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾಗ ದಾಳಿ ಘಟನೆಯ ಕುರಿತ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News