ಭಜನೆಯಿಂದ ಎಲ್ಲ ಅಂಗಾಂಗಗಳು ದೇವರಿಗೆ ಪೂರ್ಣ ಸಮರ್ಪಣೆ: ಪಲಿಮಾರು ಶ್ರೀ

Update: 2018-10-21 13:56 GMT

ಉಡುಪಿ, ಅ.21: ಜೀವನದ ಅವಿಭಾಜ್ಯ ಅಂಗವಾಗಿರುವ ಭಜನೆಯು ದೇವರು ಕೊಟ್ಟದ್ದನ್ನು ದೇವರಿಗೆ ಸಮರ್ಪಣೆ ಮಾಡಲು ಇರುವ ಬಹುದೊಡ್ಡ ಮಾಧ್ಯಮ ಎಂದು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಶ್ರೀಪಲಿಮಾರು ಮಠದ ಆಶ್ರಯದಲ್ಲಿ ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಸಹಯೋಗದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಭಜನಾ ಕಮ್ಮಟ ಮತ್ತು ನಗರ ಭಜನೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಭಜನೆಯಿಂದ ದೇಹದ ಎಲ್ಲ ಅಂಗಾಂಗಗಳನ್ನು ಕೂಡ ದೇವರಿಗೆ ಪೂರ್ಣ ವಾಗಿ ಸಮರ್ಪಣೆ ಮಾಡಬಹುದಾಗಿದೆ. ಪ್ರಪಂಚದ ಯಾವ ಜೀವಿಗಳಿಗೂ ಇಲ್ಲದ ಮಾತನಾಡುವ ನಾಲಿಗೆ ಇರುವ ಮಾನವ ಭಗವಂತನ ಭಜನೆಯನ್ನು ಮಾಡಿದಾಗ ದೇವರ ಕೃಪೆಗೆ ಭಾಜನರಾಗಲು ಸಾಧ್ಯ ಎಂದರು.

ನಗರ ಭಜನೆಗೆ ಚಾಲನೆ ನೀಡಿದ ಒಕ್ಕೂಟದ ಗೌರವಾಧ್ಯಕ್ಷ ಡಾ.ಜಿ.ಶಂಕರ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದ ಭಜನಾ ತಂಡಗಳಿಗೆ ಈಗಾಗಲೇ ಟ್ರಸ್ಟ್ ವತಿಯಿಂದ ಭಜನಾ ಪರಿಕರಗಳನ್ನು ವಿತರಿಸಲಾಗಿದ್ದು, ಮುಂದೆ ಕೂಡ ಕರಾವಳಿ ಹಾಗೂ ಒಳನಾಡು ಪ್ರದೇಶಗಳ ಭಜನಾ ಮಂಡಳಿಗೆ ಭಜನಾ ಪರಿ ಕರಗಳನ್ನು ನೀಡಲಾಗುವುದು ಎಂದರು.

ಅಧ್ಯಕ್ಷತೆಯನ್ನು ಒಕ್ಕೂಟದ ಜಿಲ್ಲಾಧ್ಯಕ್ಷ ಭೋಜರಾಜ್ ಆರ್.ಕಿದಿಯೂರ್ ಹರಿದಾಸ ಸಂಗೀತ ರತ್ನ ಪುತ್ತೂರು ನರಸಿಂಹ ನಾಯಕ್ ಭಜನಾ ಕಮ್ಮಟವನ್ನು ನಡೆಸಿಕೊಟ್ಟರು. ಉದ್ಯಮಿಗಳಾದ ಭುವನೇಂದ್ರ ಕಿದಿಯೂರ್, ಆನಂದ ಪಿ. ಸುವರ್ಣ, ಸಾಧು ಸಾಲಿಯಾನ್, ಕಾನಗುಡ್ಡೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಗೋಪಾಲ್ ಸಿ.ಬಂಗೇರ, ಕೊಡವೂರು ಶ್ರೀಶಿರಡಿ ಸಾಯಿ ಬಾಬ ಮಂದಿರದ ಧರ್ಮದರ್ಶಿ ದಿವಾಕರ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷ ಮಾಧವ ಸುವರ್ಣ ಎರ್ಮಾಳು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ಸುಂದರ್ ಜತ್ತನ್, ರಾಧಾಕೃಷ್ಣ ಮೆಂಡನ್, ಉಡುಪಿ ತಾಲೂಕು ಅಧ್ಯಕ್ಷ ಧನಂಜಯ ಕಾಂಚನ್, ಪ್ರಧಾನ ಕಾರ್ಯದರ್ಶಿ ಭರತ್‌ರಾಜ್, ಕಾರ್ಕಳ ತಾಲೂಕು ಅಧ್ಯಕ್ಷ ಶ್ರೀಕಾಂತ್ ಪ್ರಭು ಪಳ್ಳಿ, ಪ್ರಧಾನ ಕಾರ್ಯದರ್ಶಿ ಶೈಲೇಶ್ ಸಾಣೂರು ಉಪಸ್ಥಿತರಿದ್ದರು.

ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಶಿವಕುಮಾರ್ ಅಂಬಲಪಾಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಯಾನಂದ ಕರ್ಕೇರ ಕಾರ್ಯ ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News