ಕಾಶ್ಮೀರ: ಎನ್‌ಕೌಂಟರ್ ಸ್ಥಳದಲ್ಲಿ ಸ್ಫೋಟಕ್ಕೆ ನಾಲ್ವರು ಬಲಿ

Update: 2018-10-21 13:58 GMT

ಶ್ರೀನಗರ, ಅ.21: ಜಮ್ಮು-ಕಾಶ್ಮೀರದ ಕುಲ್‌ಗಾಂವ್ ನಗರದಲ್ಲಿ ರವಿವಾರ ಬೆಳಿಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. ಇದೇ ಸಂದರ್ಭ ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್‌ಗಾಂವ್ ನಗರದ ಲಾರ್ನೂ ಎಂಬಲ್ಲಿ ರವಿವಾರ ಬೆಳಿಗ್ಗೆ ಉಗ್ರರ ವಿರುದ್ಧ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಎನ್‌ಕೌಂಟರ್ ಕಾರ್ಯಾಚರಣೆ ಆರಂಭಿಸಿದ್ದರು. ಈ ಸಂದರ್ಭ ಉಗ್ರರ ಗುಂಡೇಟಿಗೆ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಕಾರ್ಯಾಚರಣೆ ಅಂತ್ಯಗೊಂಡ ಬಳಿಕ ಭದ್ರತಾ ಪಡೆಗಳ ಮುನ್ನೆಚ್ಚರಿಕೆ ಹೊರತಾಗಿಯೂ ಸ್ಥಳೀಯರು ಎನ್‌ಕೌಂಟರ್ ಸ್ಥಳಕ್ಕೆ ನುಗ್ಗಿದಾಗ ಸ್ಫೋಟ ಸಂಭವಿಸಿ ನಾಲ್ವರು ತೀವ್ರವಾಗಿ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ . ಎನ್‌ಕೌಂಟರ್ ನಡೆಸಿದ ಸ್ಥಳದಲ್ಲಿ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವವರೆಗೆ ಆ ಕಡೆ ಹೋಗಬಾರದು ಎಂದು ಭದ್ರತಾ ಪಡೆಗಳು ಎಚ್ಚರಿಸಿದ್ದರೂ ಜನರು ಕಿವಿಗೊಡಲಿಲ್ಲ ಎಂದು ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

 ಮೃತಪಟ್ಟ ನಾಗರಿಕರ ಕುಟುಂಬದವರಿಗೆ ಕುಲ್‌ಗಾಂವ್ ಜಿಲ್ಲಾಧಿಕಾರಿ 1 ಲಕ್ಷ ರೂ.ಗಳ ಪರಿಹಾರ ಮೊತ್ತ ಘೋಷಿಸಿದ್ದಾರೆ. ಎನ್‌ಕೌಂಟರ್ ಮುಕ್ತಾಯಗೊಂಡ ತಕ್ಷಣ ಅಧಿಕಾರಿಗಳು ಪ್ರದೇಶದಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

ಕಳೆದ ಒಂದು ವಾರದಲ್ಲಿ ಭದ್ರತಾ ಪಡೆಗಳು ಕಣಿವೆ ರಾಜ್ಯದಲ್ಲಿ 10 ಉಗ್ರರನ್ನು ಹತ್ಯೆ ಮಾಡಿದ್ದು ಒಬ್ಬನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News