ಪೊಲೀಸರಿಂದ ಬದುಕುವ ಹಕ್ಕುಗಳ ರಕ್ಷಣೆ: ವೆಂಕಟೇಶ್ ನಾಯ್ಕ

Update: 2018-10-21 14:04 GMT

ಉಡುಪಿ, ಅ.21: ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಂದ ಸಮಾಜದಲ್ಲಿ ಶಾಂತಿ ನೆಲೆಸಿದೆ. ಎಲ್ಲರ ಬದುಕುವ ಹಕ್ಕನ್ನು ಪೊಲೀಸರು ಕಾಪಾ ಡುತ್ತಿದ್ದಾರೆ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕೇಂದ್ರ ಸ್ಥಾನ ಚಂದು ಮೈದಾನದಲ್ಲಿ ರವಿವಾರ ಆಯೋಜಿಸಲಾದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಹುತಾತ್ಮ ಪೊಲೀಸ್ ಪ್ರತಿಮೆಗೆ ಚಕ್ರ ಪುಷ್ಪ ಗುಚ್ಚ ಸಮರ್ಪಿಸಿ ಅವರು ಮಾತನಾಡುತಿದ್ದರು.

ಪೊಲೀಸರಲ್ಲಿರುವ ಧ್ಯೇಯ, ನಾಯಕತ್ವ ಮತ್ತು ದೇಶಭಕ್ತಿ ಎಲ್ಲರಿಗೂ ಮಾದರಿಯಾಗಿದೆ. ಪೊಲೀಸರಿಗೆ ಕರ್ತವ್ಯ ಪಾಲನೆ ಸಂದರ್ಭ ಉತ್ತಮ ಕಾನೂನಿನ ಅರಿವು ನೀಡುವ ನಿಟ್ಟಿನಲ್ಲಿ ತರಬೇತಿಗಳು ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ಬ.ನಿಂಬರ್ಗಿ, ಈ ವರ್ಷ ಉಗ್ರಗಾಮಿ, ನಕ್ಸಲ್ ದಾಳಿ ಸೇರಿದಂತೆ ಕರ್ತವ್ಯ ನಿರ್ವಹಿಸುವ ವೇಳೆ ಹುತಾತ್ಮ ರಾದ 414 ಮಂದಿ ಪೊಲೀಸರ ನಾಮ ಸ್ಮರಣೆಯನ್ನು ಮಾಡಿದರು. ಹುತಾತ್ಮರ ಬಲಿದಾನವನ್ನು ನೆನೆಸಿಕೊಳ್ಳುವ ದಿನ ಇದಾಗಿದ್ದು, ಪ್ರತಿದಿನ ಸಮಾಜಘಾತುಕರ ವಿರುದ್ಧ ಹೋರಾಡುವ ನಾವು ಇಂದು ನಮ್ಮವರ ಕಣ್ಣೀರ ಭಾಗವಾಗಿ ಕುಟುಂಬ ದವರಿಗೆ ಸಾಂತ್ವನ ಹೇಳಬೇಕಾಗಿದೆ. ಆ ಮೂಲಕ ನಮ್ಮ ದೇಶ ಸೇವೆಯನ್ನು ಮುಂದುವರೆಸಬೇಕು ಎಂದು ಎಸ್ಪಿ ಹೇಳಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಜೈಶಂಕರ್ ಉಪಸ್ಥಿತರಿದ್ದರು. ಪರೇಡ್ ಕಮಾಂಡರ್ ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆರ್‌ಪಿಐ ರಾಘವೇಂದ್ರ ಆರ್. ನೇತೃತ್ವದಲ್ಲಿ ಕವಾಯತು ನಡೆಸಿ, ವಂದನೆ ಸಲ್ಲಿಸಲಾಯಿತು. ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜು ನಾಥ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News