ನ.1ರಂದು ಅಯ್ಯಪ್ಪ ಸ್ವಾಮಿ ಮಹಾಸಹಸ್ರಾರ್ಚನೆ ವಿಶೇಷ ಪೂಜೆ

Update: 2018-10-21 14:03 GMT

ಉಡುಪಿ, ಅ.21: ಧರ್ಮ ಟ್ರಸ್ಟ್ ಆಶ್ರಯದಲ್ಲಿ ಕೇರಳ ರಾಜ್ಯದ ಪಂದಳ ಪ್ಯಾಲೇಸ್ ಟ್ರಸ್ಟ್‌ನ ಅಧ್ಯಕ್ಷ ಶಶಿಕುಮಾರ್ ವರ್ಮ ನೇತೃತ್ವದಲ್ಲಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಅಯ್ಯಪ್ಪ ಸ್ವಾಮಿಯ ಮಹಾ ಸಹಸ್ರಾರ್ಚನೆ ವಿಶೇಷ ಪೂಜೆ ಯನ್ನು ನ.1ರಂದು ಸಂಜೆ 5ಗಂಟೆಗೆ ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ಉಡುಪಿ ಶ್ರೀಕೃಷ್ಣ ಮಠದ ಮಧ್ವಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜದ ಉಡುಪಿ ಜಿಲ್ಲಾಧ್ಯಕ್ಷ ಗಿರೀಶ್ ಜಿ.ಎನ್., ಅಪರಾಹ್ನ 3ಗಂಟೆಗೆ ಉಡುಪಿ ನಗರದ ಜೋಡುಕಟ್ಟೆ ಯಿಂದ ಎಂಜಿಎಂ ಮೈದಾನದವರೆಗೆ ಅಯ್ಯಪ್ಪ ಭಜನೆ ನಾಮ ಸಂಕೀರ್ತನೆ ಯೊಂದಿಗೆ ಮೆರವಣಿಗೆ ಜರಗಲಿದೆ. ಇದರಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸುಮಾರು ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಕೇರಳ ಹೊರತು ಪಡಿಸಿ ಹೊರರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಈ ವಿಶೇಷ ಕಾರ್ಯಕ್ರಮ ಕರ್ನಾಟಕದಲ್ಲಿ ನಡೆಯಲಿದೆ. ನಂತರ ಮಹಾರಾಷ್ಟ್ರದ ಮುಂಬೈ, ತಮಿಳುನಾಡಿನ ಚೆನ್ನೈ ಅಥವಾ ಕೊಯಮುತ್ತೂರು, ಆಂಧ್ರಪ್ರದೇಶ ರಾಜ್ಯದ ಹೈದರಬಾದ್ ಮತ್ತು ಅಂತಿಮವಾಗಿ ನವದೆಹಲಿಯಲ್ಲಿ ಈ ಕಾರ್ಯ ಕ್ರಮ ಜರಗಲಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೇವಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಬೈಂದೂರು ತಾಲೂಕಿನ ರಾಜು, ಕಾಪು ತಾಲೂಕಿನ ಗೋಪಾಲ ಪೂಜಾರಿ, ವೈ.ಎನ್.ತಿಮ್ಮಪ್ಪ, ಕುಂದಾಪುರ ತಾಲೂಕಿನ ಕೆ.ರಘುಚಂದ್ರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News