ಕೋಟೇಶ್ವರ: ಮರಳು ಸಮಸ್ಯೆ ವಿರುದ್ಧ ನಾಲ್ಕನೆ ದಿನಕ್ಕೆ ಮುಷ್ಕರ; ಸಚಿವೆ ಜಯಮಾಲ ಭೇಟಿ

Update: 2018-10-21 14:48 GMT

ಕುಂದಾಪುರ, ಅ.21: ಮರಳು ನೀತಿ ಸಡಿಲಗೊಳಿಸಿ, ಜಿಲ್ಲೆಯಲ್ಲಿ ಕೂಡಲೇ ಮರಳು ತೆಗೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಟಿಪ್ಪರ್ ಮಾಲಕರ ಸಂಘ ನಡೆಸುತ್ತಿರುವ ಮುಷ್ಕರವು ರವಿವಾರ ನಾಲ್ಕನೆ ದಿನಕ್ಕೆ ಕಾಲಿರಿಸಿದ್ದು, ಈ ಹಿನ್ನೆಲೆಯಲ್ಲಿ ಕೋಟೇಶ್ವರದ ಮುಷ್ಕರದ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮುಷ್ಕರ ನಿರತರೊಂದಿಗೆ ಮಾತುಕತೆ ನಡೆಸಿದ ಅವರು, ಟಿಪ್ಪರ್ ಮಾಲಕರ ಸಮಸ್ಯೆಗಳನ್ನು ಆಲಿಸಿದರು. ಜಿಲ್ಲಾಡಳಿತವು ಜಿಲ್ಲೆಯಲ್ಲಿ ಮರಳು ತೆಗೆಯಲು ಅವಕಾಶ ಕಲ್ಪಿಸದ ಪರಿಣಾಮ ಅನೇಕರು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡದ ಉಡುಪಿ ಜಿಲ್ಲಾಧಿಕಾರಿ ಯನ್ನು ಇಲ್ಲಿಂದ ವರ್ಗಾವಣೆ ಮಾಡಬೇಕೆಂದು ಮಾಲಕರು ಆಗ್ರಹಿಸಿದರು.

ಜನರ ಸಮಸ್ಯೆ ಪರಿಹರಿಸದ ಅಧಿಕಾರಿಗಳು ನಮಗೆ ಬೇಡ. ಇವರನ್ನು ವರ್ಗಾಯಿಸಿ ಬೇರೆ ಜಿಲ್ಲಾಧಿಕಾರಿಗಳನ್ನು ನಿಯೋಜಿಸಬೇಕು. ಮರಳಿನ ಸಮಸ್ಯೆ ಇದೇ ರೀತಿ ಮುಂದುವರಿದರೆ ಕೂಲಿ ಕಾರ್ಮಿಕರು, ವಾಹನ ಚಾಲಕರು, ಮಾಲಕರು ಕೆಲಸವಿಲ್ಲದೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಆದುದರಿಂದ ಪರಿಸ್ಥಿತಿ ಅರ್ಥ ಮಾಡಿಕೊಂಡು ಕೂಡಲೇ ಮರಳು ತೆಗೆುಲು ಅವಕಾಶ ನೀಡಬೇಕು ಎಂದರು.

ಮುಷ್ಕರ ಕೈಬಿಡಲು ಮನವಿ: ಬಳಿಕ ಮಾತನಾಡಿದ ಸಚಿವರು, ಈ ಕುರಿತು ಸರಕಾರದ ಮಟ್ಟದಲ್ಲಿ ನಿರಂತರ ಮಾತುಕತೆಗಳು ನಡೆಯುತ್ತಿವೆ. ಅ.22ರಂದು ಜಿಲ್ಲಾಧಿಕಾರಿಗಳನ್ನು ಮತ್ತೋಮ್ಮೆ ಭೇಟಿ ಮಾಡಿ ಸಿಆರ್‌ಝಡ್ ಹಾಗೂ ನಾನ್‌ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು ಅನುಮತಿ ನೀಡಲು ಸೂಚನೆ ನೀಡುತ್ತಿನೇ ಎಂದು ತಿಳಿಸಿದರು.

ಮರಳು ಸಮಸ್ಯೆಯ ವಿಚಾರದಲ್ಲಿ ಜನಪ್ರತಿ ನಿಧಿಗಳನ್ನು ಗುರಿ ಮಾಡುವುದು ಸರಿಯಲ್ಲ. ಮರಳು ಪೂರೈಕೆಗೆ ಕೆಲವೊಂದು ಕಾನೂನಿನ ತೊಡಕುಗಳಿವೆ. ಅದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಆದುದರಿಂದ ಟಿಪ್ಪರ್ ಮುಷ್ಕರ ಹಿಂಪಡೆ ಯಬೇಕು ಎಂದು ಸಚಿವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಟಿಪ್ಪರ್ ಚಾಲಕ- ಮಾಲಕರ ಸಂಘದ ತಾಲೂಕು ಅಧ್ಯಕ್ಷ ಗುಣಕರ ಶೆಟ್ಟಿ, ಸಂಘದ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ನಿತ್ಯಾನಂದ ಕೋಟೇಶ್ವರ, ಭೋಜ ಪೂಜಾರಿ, ವಾಸು ಶೇರುಗಾರ್ ಗಂಗೊಳ್ಳಿ ಮೊದಲಾದ ವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News