'ಮೀಟೂ' ಚಳವಳಿ ಒಳ್ಳೆಯ ಬೆಳವಣಿಗೆ: ನಟಿ ರಾಗಿಣಿ ದ್ವಿವೇದಿ

Update: 2018-10-21 14:56 GMT

ಮಂಗಳೂರು, ಅ.21: 'ಮೀಟೂ' ಚಳವಳಿಯು ರಾಷ್ಟ್ರ ಮಟ್ಟದಲ್ಲಿ ಪ್ರತಿದಿನವೂ ಬೆಳೆಯುತ್ತಿದ್ದು, ಸಂತ್ರಸ್ತರು ತಮ್ಮ ನೋವಿನಿಂದ ಹೊರಬಂದು ಮಾತನಾಡುತ್ತಿದ್ದಾರೆ. ಮೀಟೂ ಚಳವಳಿ ಒಳ್ಳೆಯ ಬೆಳವಣಿಗೆಯಾಗಿದೆ ಎಂದು ನಟಿ ರಾಗಿಣಿ ದ್ವಿವೇದಿ ಅಭಿಪ್ರಾಯಪಟ್ಟಿದ್ದಾರೆ.

ನಗರದ ಮಂಗಳಾದೇವಿ ದೇವಸ್ಥಾನಕ್ಕೆ ರವಿವಾರ ಭೇಟಿ ನೀಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಿರುಕುಳದಂತಹ ಘಟನೆ ಆದಾಗ ಯಾರಿಗಾಗಲಿ ನೋವು ಆಗುತ್ತೆ. ಆದರೆ ಇತ್ತೀಚೆಗೆ ಮೀಟೂ ಚಳವಳಿಯನ್ನು ದೂರುಪಯೋಗ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಆದರೆ ಸುಮ್ಮನೆ ಯಾರೂ ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಅದರ ಹಿಂದೆ ಕಾರಣಗಳು ಇದ್ದೇ ಇರುತ್ತವೆ. ಆರೋಪಿಗಳಿಗೆ ಶಿಕ್ಷೆಯಾಗಲೇಬೇಕು. ತಾನು ಮೀಟೂ ಚಳವಳಿ ಪರ ಇರುವುದಾಗಿ ಅವರು ತಿಳಿಸಿದರು.

ಶಬರಿಮಲೆಗೆ ಮಹಿಳೆಯರ ನಿರ್ಬಂಧ ಸಲ್ಲದು: ಶಬರಿಮಲೆ ದೇವಾಲಯಕ್ಕೆ ಮಹಿಳೆಯ ಪ್ರವೇಶ ನಿರ್ಬಂಧಿಸುವುದು ಸರಿಯಲ್ಲ. ದೇವರನ್ನು ಪೂಜೆ ಮಾಡುವ ಸಂದರ್ಭ ಅಂತಹವರನ್ನು ಯಾರು ತಡೆಯಬಾರದು. ಪುರುಷರು ಪೂಜೆ ಮಾಡಬೇಕು. ಮಹಿಳೆಯರು ಪೂಜೆ ಮಾಡಬಾರದು ಎಂದು ದೇವರು ಯಾವತ್ತೂ ಹೇಳುವುದಿಲ್ಲ. ದೇವರ ಕಣ್ಣಲ್ಲಿ ಎಲ್ಲರೂ ಒಂದೇ ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದರು.

ಯಾವುದೇ ಮಹಿಳೆ ಅಸ್ವಚ್ಛತೆಯಿಂದ ದೇವಸ್ಥಾನಕ್ಕೆ ಹೋಗುವುದಿಲ್ಲ. ಆದರೆ ಇಂತಹ ಸಣ್ಣ ಪುಟ್ಟ ಕಾರಣಕ್ಕೆ ದೇವಾಲಯ ಪ್ರವೇಶ ನಿಷೇಧ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಎಲ್ಲರೂ ಕುಳಿತು ಚರ್ಚಿಸಬಹುದಾದ ಆಧುನಿಕ ಕಾಲಮಾನದಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News