×
Ad

ರಾಜ್ಯಮಟ್ಟಲ್ಲಿ ಕ್ರೈಸ್ತ ಮಹಿಳೆಯರ ಸ್ವಸಹಾಯ ಒಕ್ಕೂಟ ಬಲಪಡಿಸುವ ಪ್ರಯತ್ನ: ಬಿಷಪ್ ಲೋಬೊ

Update: 2018-10-21 20:35 IST

ಉಡುಪಿ, ಅ.21: ಕ್ರೈಸ್ತ ಮಹಿಳೆಯರು ತಮ್ಮ ಸರ್ವಾಂಗೀಣ ಅಭಿವೃದ್ಧಿ ಹೊಂದಲು, ಸ್ವಸಹಾಯ ಗುಂಪುಗಳಲ್ಲಿ ಸೇರಿಕೊಂಡು, ಅದರ ಲಾಭವನ್ನು ಪಡೆದುಕೊಳ್ಳಬೇಕು. ಆ ಮೂಲಕ ಕೆಥೋಲಿಕ್ ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಹೇಳಿದ್ದಾರೆ.

ಶಿರ್ವ ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಕೆಥೊಲಿಕ್ ಸ್ತ್ರೀ ಸಂಘಟನೆ ಇದರ ಶಿರ್ವ ವಲಯ ವ್ಯಾಪ್ತಿಯ ಕಾಪು ತಾಲೂಕು ಮಟ್ಟದ ಇಂಚರ ಮಹಿಳಾ ಒಕ್ಕೂಟದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಆಶೀರ್ವಚನ ನೀಡಿದರು.

ಕ್ರೈಸ್ತ ಸಮುದಾಯದ ಮಹಿಳೆಯರನ್ನು ಆರ್ಥಿಕವಾಗಿ ಬಲಪಡಿಸುವುದು ಸ್ತ್ರೀ ಸಂಘಟನೆಯ ಉದ್ದೇಶವಾಗಿದೆ. ಅದಕ್ಕೆ ಪೂರಕವಾಗಿ ಸ್ವಸಹಾಯ ಸಂಘಗಳನ್ನು ರಚಿಸಲಾಗಿದ್ದು, ಅದರಂತೆ ಚರ್ಚ್ ಹಂತದಿಂದ ರಾಜ್ಯ ಮಟ್ಟದ ವರೆಗೂ ಸ್ವ-ಸಹಾಯ ಒಕ್ಕೂಟಗಳನ್ನು ಬಲಪಡಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು.

ಸ್ವಸಹಾಯ ಸಂಘಗಳು ಮೂಲಕ ಧರ್ಮಪ್ರಾಂತ್ಯದ ಮಟ್ಟದಲ್ಲಿ ಮಹಿಳೆಯ ರನ್ನು ಒಗ್ಗೂಡಿಸಿ ಮಹಿಳಾ ಸಬಲೀಕರಣ ಮಾಡುವುದು ಪ್ರಮುಖ ಗುರಿ ಯಾಗಿದೆ. ಮಹಿಳೆಯರೆ ಒಟ್ಟಾಗಿ ಸೇರಿ ಮಹಿಳಾ ಸಂಘಟನೆಯನ್ನು ಬಲ ಪಡಿಸಿದಾಗ ಮಾತ್ರ ನಿಜವಾದ ಸಬಲೀಕರಣ ಆಗಲು ಸಾಧ್ಯವಿದೆ. ಮಹಿಳೆ ಯರು ಆರ್ಥಿಕವಾಗಿ ಸಬಲೀಕರಣಗೊಳ್ಳವ ಅಗತ್ಯವಿದೆ. ಸ್ವಸಹಾಯ ಗುಂಪು ಗಳು ಸ್ವಾವಲಂಬಿ ಬದುಕು ರೂಪಿಸಲು ಸಹಕಾರಿಯಾಗುತ್ತವೆ ಎಂದು ಅವರು ತಿಳಿಸಿದರು.

ಇಂದು ಕ್ರೈಸ್ತ ಸಮುದಾಯದ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲೂ ತನ್ನ ಪ್ರಭಾವವನ್ನು ಬೀರುತ್ತಿದ್ದಾರೆ. ಉಡುಪಿ ಜಿಲ್ಲೆಯ ಗ್ರಾಪಂನಿಂದ ಜಿಪಂವರೆಗೆ 67 ಮಂದಿ ಕ್ರೈಸ್ತ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜಕೀಯವಾಗಿ ಮಹಿಳೆಯರು ಮುಂಚೂಣಿಗೆ ಬರುವುದರಿಂದ ಮಹಿಳಾ ಹಕ್ಕುಗಳ ಪರದನಿ ಎತ್ತಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಅಧ್ಯಕ್ಷತೆಯನ್ನು ಶಿರ್ವ ವಲಯ ಪ್ರಧಾನ ಧರ್ಮಗುರು ವಂ.ಡೆನಿಸ್ ಡೆಸಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಆಧ್ಯಾತ್ಮಿಕ ನಿರ್ದೇಶಕ ವಂ.ರೆಜಿನಾಲ್ಟ್ ಡಿಸೋಜ, ಶಿರ್ವ ವಲಯದ ಆಧ್ಯಾತ್ಮಿಕ ನಿರ್ದೇಶಕ ವಂ.ಡಾ.ರೋಕ್ ಡಿಸೋಜ, ಧರ್ಮಪ್ರಾಂತ್ಯದ ಸ್ತ್ರೀಸಂಘಟನೆಯ ಸಚೇತಕಿ ಸಿಸ್ಟರ್ ಜಾನೆಟ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಅಧ್ಯಕ್ಷೆ ಜಾನೆಟ್ ಬಾರ್ಬೊಜಾ, ವಲಯ ಅಧ್ಯಕ್ಷೆ ಟ್ರೀಜಾ ಮಚಾದೊ, ಕಾರ್ಯದರ್ಶಿ ಸುನೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ವಿವೇಕಾನಂದ, ಹಿರಿಯ ಸಂಗೀತಗಾರ್ತಿ ಮೀನಾ ರೆಬಿಂಬಸ್ ಉಪಸ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News