ಇನ್ನೊಂದು ‘ಬ್ರೆಕ್ಸಿಟ್’ ಜನಮತಗಣನೆಗೆ ಒತ್ತಾಯಿಸಿ ಬೃಹತ್ ಮೆರವಣಿಗೆ

Update: 2018-10-21 17:44 GMT

 ಲಂಡನ್, ಅ. 21: ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಹೋಗುವುದನ್ನು (ಬ್ರೆಕ್ಸಿಟ್) ವಿರೋಧಿಸಿ ಶನಿವಾರ ಲಂಡನ್‌ನಲ್ಲಿ ಜನರು ಬೃಹತ್ ಮೆರವಣಿಗೆ ನಡೆಸಿದರು ಹಾಗೂ ಅಂತಿಮ ‘ಬ್ರೆಕ್ಸಿಟ್’ ಒಪ್ಪಂದದ ಬಗ್ಗೆ ಜನಮತಗಣನೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಿದರು.

ಸುಮಾರು 7 ಲಕ್ಷ ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು ಎಂದು ಸಂಘಟಕರು ಹೇಳಿದ್ದಾರೆ.

2003ರಲ್ಲಿ ಇರಾಕ್ ಯುದ್ಧ ವಿರೋಧಿ ಪ್ರತಿಭಟನೆ ನಡೆದ ಬಳಿಕ, ಸರಕಾರದ ನೀತಿಯನ್ನು ವಿರೋಧಿಸಿ ಇಷ್ಟೊಂದು ಬೃಹತ್ ಗಾತ್ರದ ಪ್ರತಿಭಟನೆ ನಡೆದಿರುವುದು ಇದೇ ಮೊದಲು ಎಂದು ‘ದ ಗಾರ್ಡಿಯನ್’ ವರದಿ ಮಾಡಿದೆ.

ಮಧ್ಯ ಲಂಡನ್‌ನ ಪಾರ್ಲಿಮೆಂಟ್ ಚೌಕದತ್ತ ಸಾಗಿದ ‘ಜನರ ಮತ’ ಮೆರವಣಿಗೆಯ ಮುಂಚೂಣಿಯಲ್ಲಿ ಲಂಡನ್ ಮೇಯರ್ ಸಾದಿಕ್ ಖಾನ್ ಸಾಗಿದರು ಹಾಗೂ ಬಳಿಕ ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದರು.

ಮೆರವಣಿಗೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮತ್ತು ಖ್ಯಾತನಾಮರು ಭಾಗವಹಿಸಿದರು.

ಬ್ರಿಟನ್‌ನ ಐರೋಪ್ಯ ಒಕ್ಕೂಟ ಸದಸ್ಯತ್ವದ ಬಗ್ಗೆ ಇನ್ನೊಂದು ಜನಮತಗಣನೆ ನಡೆಸುವಂತೆ ಕಳೆದ ತಿಂಗಳು ಸಾದಿಕ್ ಖಾನ್ ಕರೆ ನೀಡಿದ್ದರು ಹಾಗೂ ಐರೋಪ್ಯ ಒಕ್ಕೂಟದೊಂದಿಗಿನ ಬ್ರೆಕ್ಸಿಟ್ ಮಾತುಕತೆಗಳನ್ನು ಸರಕಾರ ನಿಭಾಯಿಸುತ್ತಿರುವ ರೀತಿಯನ್ನು ಟೀಕಿಸಿದ್ದರು.

ಎರಡನೇ ಜನಮತಗಣನೆ ನಡೆಸುವುದನ್ನು ಪ್ರಧಾನಿ ತೆರೇಸಾ ಮೇ ಈಗಾಗಲೇ ತಳ್ಳಿಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News