ಬಂಟ್ವಾಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ಕಾರು ಸಹಿತ ಐದು ಮಂದಿ ಆರೋಪಿಗಳು ಸೆರೆ

Update: 2018-10-21 17:50 GMT

ಬಂಟ್ವಾಳ, ಅ. 21: ವಾಹನ ತಪಾಸಣೆಯ ವೇಳೆ ಕಾರಿನಲ್ಲಿ ಬಂದ ತಂಡವೊಂದು ಎಸ್ಸೈ ಹಾಗೂ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಕಾರು ಸಹಿತ ಐವರು ಆರೋಪಿಗಳನ್ನು ಬಂಧಿಸಿದ ಘಟನೆ ಬಿ.ಸಿ.ರೋಡ್ ನಾರಾಯಣ ಗುರು ಸರ್ಕಲ್‍ನಲ್ಲಿ ರವಿವಾರ ನಡೆದಿದೆ.

ಕಾರಿನಲ್ಲಿದ್ದ ಮೂಡಬಿದಿರೆ ನಿವಾಸಿಗಳಾದ ಜಿತೇಶ್ (31), ವಿಕೇಶ (27), ಆಸ್ಟಿನ್ (23), ಆರ್ವಿನ್ (21) ಹಾಗೂ ಆಲ್ಡ್ರಿನ್ (18) ಬಂಧಿತ ಆರೋಪಿಗಳಾಗಿದ್ದು, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ವಿವರ

ಇಂದು ಸಂಜೆ ಬಿ.ಸಿ.ರೋಡಿನ ನಾರಾಯಣಗುರು ಸರ್ಕಲ್‍ನಲ್ಲಿ ಬಂಟ್ವಾಳ ಟ್ರಾಫಿಕ್ ಠಾಣೆಯ ಉಪನಿರೀಕ್ಷಕಿ ಮಂಜುಳಾ ಕೆ.ಎಂ. ಅವರು ಪೊಲೀಸ್ ಸಿಬ್ಬಂದಿಗಳೊಂದಿಗೆ ವಾಹನ ತಪಾಸಣಾ ಕರ್ತವ್ಯದಲ್ಲಿ ತೊಡಗಿಕೊಂಡಿದ್ದರು. ಈ ವೇಳೆ ಪುತ್ತೂರು ಕಡೆಯಿಂದ ಕಾರೊಂದು ಬಂದಿದ್ದು, ಟಿಂಟೆಡ್ ಗ್ಲಾಸ್ ಇರುವುದನ್ನು ಹಾಗೂ ಸೀಟ್ ಬೆಲ್ಟ್ ಹಾಕದಿರುವುದನ್ನು ಕಂಡು ಕಾರನ್ನು ಎಸ್ಸೈ ಹಾಗೂ ಸಿಬ್ಬಂದಿ ತಡೆದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಕಾರಿನಲ್ಲಿದ್ದ ತಂಡ, ಎಸ್ಸೈ ಹಾಗೂ ಸಿಬ್ಬಂದಿಗೆ "ಈ ಬೋಳಿ ಮಕ್ಕಳಿಗೆ ಬುದ್ಧಿ ಕಲಿಸಬೇಕು. ಯುವಶಕ್ತಿ ಒಂದಾದರೆ ಪೊಲೀಸರನ್ನು ನಾಯಿಗಳ ಹಾಗೆ ಬೀದಿಯಲ್ಲಿ ಹೊಡೆಯುತ್ತೇವೆ. ಈ ಲೇಡಿಯ ಮರ್ಯಾದೆ ತೆಗೆದು ಸರ್ಕಲ್‍ನಲ್ಲಿ ನಿಲ್ಲಿಸುತ್ತೇನೆ. ಮೀಡಿಯಾ ಪವರ್ ಏನೆಂದು  ತೋರಿಸುತ್ತೇವೆ. ಈ ಲೇಡಿಗಳು ಮನೆಯಲ್ಲಿ ಅಡುಗೆ ಮಾಡೋದಕ್ಕೆ ಲಾಯಕ್ಕು. ಅದನ್ನು ಬಿಟ್ಟು ಗಂಡುಬೀರಿಯಂತೆ ರಸ್ತೆಯಲ್ಲಿ ನಿಂತು ನಮ್ಮ ಖುಷಿಯನ್ನು ಹಾಳು ಮಾಡುತ್ತಿದ್ದೀರಿ" ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದೂ ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೇರೆ ವಾಹನಗಳ ತಪಾಸಣೆಗೂ ಅಡ್ಡಿ ಮಾಡಿದ್ದಾರೆ ಎಂದು ಟ್ರಾಫಿಕ್ ಎಸ್ಸೈ ಅವರ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನ ತಪಾಸಣೆಯ ವೇಳೆ ಕಾರಿನಲ್ಲಿ ಬಂದ ತಂಡವೊಂದು ಎಸ್ಸೈ ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News