ಯುಪಿಸಿಎಲ್: ತೆಂಕ ಗ್ರಾಪಂಗೆ ಧೃಢೀಕರಣ ಪತ್ರ ಹಸ್ತಾಂತರ
ಉಡುಪಿ, ಅ.22: ಅದಾನಿ ಯುಪಿಸಿಎಲ್ ಸಂಸ್ಥೆಯು ಸಿಎಸ್‌ಆರ್ ಅನುದಾನದಡಿ ತೆಂಕ ಗ್ರಾಪಂಗೆ 2018-19ನೇ ವಾರ್ಷಿಕ ಸಾಲಿನಲ್ಲಿ 85.33 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಕುರಿತ ಧೃಢೀಕರಣ ಪತ್ರವನ್ನು ಇಂದು ಹಸ್ತಾಂತರಿಸಲಾಯಿತು.
ಗ್ರಾಪಂ ಕಛೇರಿಯ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ತೆಂಕ ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ ಮತ್ತು ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಕ್ರಿಯಾಯೋಜನೆಯ ಪತ್ರ ಮತ್ತು ಸಂಸ್ಥೆಯ ಧೃಢೀಕರಣ ಪತ್ರವನ್ನು ಪರಸ್ಪರ ವಿನಿಮಯ ಮಾಡಿಕೊಂಡರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಕಿಶೋರ್ ಕುಮಾರ್, ಸದಸ್ಯರಾದ ರತ್ನಾಕರ, ಅನಿತಾ ನಾಯಕ್, ತಾಪಂ ಸದಸ್ಯರಾದ ಕೇಶವ ಮೊಯಿಲಿ, ಮೊಗವೀರ ಸಭಾ ಅಧ್ಯಕ್ಷ ದಾಮೋದರ ಸುವರ್ಣ, ಗ್ರಾಪಂ ಕಾರ್ಯದರ್ಶಿ ವಸಂತಿ ಬಾಯಿ, ಮಾಜಿ ಸದಸ್ಯೆ ಕಸ್ತೂರಿ ಪ್ರವೀಣ, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಅದಾನಿ ಫೌಂಡೇಷನ್‌ನ ಸದಸ್ಯರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.