ಖಶೋಗಿ ಹತ್ಯೆ: ಸಂಸತ್ತಿನಲ್ಲಿ ವಿವರ ನೀಡಲಿದ್ದೇನೆ ಎಂದ ಟರ್ಕಿ ಅಧ್ಯಕ್ಷ ಎರ್ದೊಗಾನ್

Update: 2018-10-22 14:22 GMT

ಇಸ್ತಾಂಬುಲ್, ಅ. 22: “ಸಂಸತ್ತಿನಲ್ಲಿ ನಾನು ಮಂಗಳವಾರ ಮಾಡಲಿರುವ ಭಾಷಣದಲ್ಲಿ, ಸೌದಿ ಅರೇಬಿಯದ ಪತ್ರಕರ್ತ ಜಮಾಲ್ ಖಶೋಗಿ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿದ್ದೇನೆ” ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಹೇಳಿದ್ದಾರೆ.

 ಅದೇ ದಿನ ರಿಯಾದ್‌ನಲ್ಲಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆ ಸಮಾವೇಶ ನಡೆಯಲಿದೆ ಎನ್ನುವುದನ್ನು ಸ್ಮರಿಸಬಹುದಾಗಿದೆ.

 ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸುಲೇಟ್‌ನಲ್ಲಿ ಅಕ್ಟೋಬರ್ 2ರಂದು ನಡೆದ ‘ಮುಷ್ಟಿ ಕಾಳಗ’ದಲ್ಲಿ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಗೆ ಅಂಕಣಗಳನ್ನು ಬರೆಯುವ 59 ವರ್ಷದ ಪತ್ರಕರ್ತ ಮೃತಪಟ್ಟಿದ್ದಾರೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿ 18 ಸೌದಿ ರಾಷ್ಟ್ರೀಯರನ್ನು ಬಂಧಿಸಲಾಗಿದೆ ಎಂಬುದಾಗಿ ಸೌದಿ ಅರೇಬಿಯ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಈ ವಿವರಣೆಯ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಸಂಶಯ ವ್ಯಕ್ತಪಡಿಸಿದೆ ಹಾಗೂ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರನ್ನು ರಕ್ಷಿಸಲು ಕಥೆ ಕಟ್ಟಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

‘‘15 ಸದಸ್ಯರ ಸೌದಿ ಹಂತಕ ಪಡೆ ಇಸ್ತಾಂಬುಲ್‌ಗೆ ವಿಮಾನದಲ್ಲಿ ಬಂತು, ಕೌನ್ಸುಲೇಟ್ ಕಚೇರಿಯಲ್ಲಿ ಖಶೋಗಿಗಾಗಿ ಹೊಂಚು ಹಾಕಿತು. ಖಶೋಗಿ ಒಳಗೆ ಕಾಲಿಟ್ಟ ಕೂಡಲೇ ಅವರ ಬೆರಳುಗಳನ್ನು ಕತ್ತರಿಸಿತು. ಬಳಿಕ ಅವರ ತಲೆಕಡಿದು ದೇಹವನ್ನು ಛಿದ್ರಛಿದ್ರಗೊಳಿಸಿತು’’ ಎಂಬುದಾಗಿ ಟರ್ಕಿಯ ಪತ್ರಿಕೆಗಳು ವರದಿ ಮಾಡಿವೆ.

‘‘ಈ 15 ಮಂದಿ ಇಲ್ಲಿಗೆ ಯಾಕೆ ಬಂದರು? 18 ಮಂದಿಯನ್ನು ಯಾಕೆ ಬಂಧಿಸಲಾಗಿದೆ?, ಈ ಎಲ್ಲ ಸಂಗತಿಗಳನ್ನು ವಿವರವಾಗಿ ವಿವರಿಸಬೇಕಾಗಿದೆ’’ ಎಂದು ಎರ್ದೊಗಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News