ಉಳ್ಳಾಲ: ತಮಿಳ್ನಾಡು ಮೂಲದ 6 ದೋಣಿಗಳ ವಶ
ಮಂಗಳೂರು, ಅ.22: ಉಳ್ಳಾಲದ ಕೋಟೆಪುರ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ತಮಿಳ್ನಾಡು ಮೂಲದ 6 ದೋಣಿಗಳನ್ನು ಮೀನುಗಾರಿಕೆ ಮತ್ತು ಪೊಲೀಸ್ ಇಲಾಖೆ ಹಾಗೂ ಕರಾವಳಿ ತಟರಕ್ಷಣಾ ಪಡೆಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಸೋಮವಾರ ಸಂಜೆ ನಡೆದಿದೆ.
ಸ್ಥಳೀಯರು ನೀಡಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ತಂಡವು ಸೂಕ್ತ ದಾಖಲೆಪತ್ರಗಳಿಲ್ಲದ ಕಾರಣ ಈ ದೋಣಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಮುಂದಾಗಿದ್ದಾರೆ. ಮೂಲವೊಂದರ ಪ್ರಕಾರ ನಿಷೇಧಿತ ಕಪ್ಪೆ ಬೊಂಡಾಸ್ ಹಿಡಿಯಲು ತಮಿಳ್ನಾಡಿನ ಮೀನುಗಾರರು ಬಂದಿದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳು ಅದನ್ನು ಖಚಿತಪಡಿಸುತ್ತಿಲ್ಲ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಚಿಕ್ಕವೀರ ನಾಯಕ್, ಉಳ್ಳಾಲದಲ್ಲಿ ಅಕ್ರಮ ದೋಣಿ ಲಂಗರು ಹಾಕಿಕೊಂಡಿದೆ ಎಂದು ಸಾರ್ವಜನಿಕರ ದೂರಿನ ಮೇರೆಗೆ ಸ್ಥಳಕ್ಕೆ ತೆರಳಿ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ದೋಣಿಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕೆ ದೋಣಿಗಳನ್ನು ಕರಾವಳಿ ತಟರಕ್ಷಣಾ ಪಡೆಗೆ ಹಸ್ತಾಂತರಿಸಲಾಗಿದೆ ಎಂದಿದ್ದಾರೆ.
ಈ ದೋಣಿಗಳು ಅಕ್ರಮ ಮೀನುಗಾರಿಕೆ ನಡೆಸಲು ಪ್ರಯತ್ನಿಸಿದ್ದರೆ ಅದು ಖಂಡನೀಯ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಕರಾವಳಿಯ ಮೀನುಗಾರರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿಷೇಧಿತ ಮೀನುಗಾರಿಕೆಗೆ ಯತ್ನಿಸಿದ್ದೇ ಆದರೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಮಂಗಳೂರು ಗಿಲ್ ನೆಟ್ ಮೀನುಗಾರರ ಸಂಘದ ಅಧ್ಯಕ್ಷ ಅಲಿ ಹಸನ್ ಒತ್ತಾಯಿಸಿದ್ದಾರೆ.