ಉಡುಪಿ: ಮರಳು ಸಮಸ್ಯೆ; ಅ. 25ರಿಂದ ಕಾರ್ಮಿಕರ ಅನಿರ್ಧಿಷ್ಟಾವಧಿ ಧರಣಿ

Update: 2018-10-22 15:14 GMT

ಉಡುಪಿ, ಅ.22: ಜಿಲ್ಲೆಯಲ್ಲಿ ತೀವ್ರ ಸಂಕಷ್ಟವನ್ನು ಸೃಷ್ಟಿಸಿರುವ ಮರಳು ಸಮಸ್ಯೆಯನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಬಡ ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣದ ವಿವಿಧ ಕಾರ್ಮಿಕರು ಹಾಗೂ ಮರಳುಗಾರಿಕೆಗೆ ಸಂಬಂಧಿಸಿದ ಇತರ ಉದ್ಯೋಗಿಗಳು ಅ.25ರಿಂದ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿಯ ಧರಣಿ ಮುಷ್ಕರಕ್ಕೆ ಪಕ್ಷ ಬೇಧ ಮರೆತು ಎಲ್ಲಾ ಜನಪ್ರತಿನಿಧಿಗಳು ಸಂಪೂರ್ಣ ಬೆಂಬಲ ನೀಡಲಿದ್ದು, ಸಮಸ್ಯೆ ಬಗೆಹರಿಯುವವರೆಗೆ ಇದು ಮುಂದುವರಿಯಲಿದೆ ಎಂದು ವಿಧಾನಪರಿಷತ್ತಿನಲ್ಲಿ ವಿಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ತನ್ನ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ದಶಕಗಳಲ್ಲಿ ಜಿಲ್ಲೆಯಲ್ಲಿ ಇಂಥ ಒಂದು ಆಡಳಿತಾತ್ಮಕ ಅವ್ಯವಸ್ಥೆಯನ್ನು ನಾನು ನೋಡಿಯೇ ಇಲ್ಲ ಎಂದು ಟೀಕಿಸಿದರು.

ಮರಳು ಸಾಗಾಟದ ಟಿಪ್ಪರ್‌ಗಳ ಮಾಲಕರು ಹಾಗೂ ಚಾಲಕರು ನಡೆಸುತ್ತಿರುವ ಮುಷ್ಕರ ಇಂದು ಐದನೇ ದಿನ ಪ್ರವೇಶಿಸಿದ್ದು, ಜಿಲ್ಲೆಯಾದ್ಯಂತ ಬೈಂದೂರಿನಿಂದ ಹೆಜಮಾಡಿಯವರೆಗೆ ಹೆದ್ದಾರಿ ಪಕ್ಕದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿ ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಲುದ್ದೇಶಿಸಿದ್ದ ಅವರ ಪ್ರತಿಭಟನೆಗೆ ಜಿಲ್ಲಾಡಳಿತ ತಡೆಯೊಡ್ಡಿದೆ ಎಂದರು.

ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ವಾಹನ ಚಾಲಕರ ಮೇಲೆ ವಿನಾಕಾರಣ ದೌರ್ಜನ್ಯ ನಡೆಸಿದರೆ, ಜಿಲ್ಲೆಯ ಎಲ್ಲಾ ಶಾಸಕರು ಅವರಿಗೆ ಬೆಂಬಲ ನೀಡಿ ಪ್ರತಿಭಟಿಸುತ್ತೇವೆ ಎಂದವರು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೀಗ ಅ.25ರಿಂದ ಮರಳುಗಾರಿಕೆಗೆ ಸಂಬಂಧಿಸಿ ಹೊಯ್ಗೆ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಇತರರು ಕೆಲಸವಿಲ್ಲದೇ ಬದುಕು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಮರಳುಗಾರಿಕೆಯನ್ನು ಕೂಡಲೇ ಪ್ರಾರಂಭಿಸುವಂತೆ ಅವರು ಧರಣಿ ಪ್ರಾರಂಭಿಸಲಿದ್ದು, ಇದರಲ್ಲಿ ಜಿಲ್ಲೆಯ ಎಲ್ಲಾ ಐವರು ಶಾಸಕರು ಹಾಗೂ ಎಂಎಲ್‌ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಕಳೆದ ತಿಂಗಳು ಮುಖ್ಯಮಂತ್ರಿಗಳು ಉಡುಪಿಗೆ ಬಂದಾಗ ಅ.15ರೊಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಮರಳುಗಾರಿಕೆ ಪ್ರಾರಂಭಿಸುವಂತೆ ಆದೇಶ ನೀಡಿದ್ದರು. ಅಲ್ಲದೇ ಬೆಂಗಳೂರಿನಲ್ಲಿ ಕರಾವಳಿ ಜಿಲ್ಲೆಗಳ ಶಾಸಕರ ಪ್ರತ್ಯೇಕ ಸಭೆ ಕರೆದು ಅಲ್ಲೂ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಜಿಲ್ಲಾಡಳಿತ ಮರಳುಗಾರಿಕೆ ಪ್ರಾರಂಭಕ್ಕೆ ಮೀನಮೇಷ ಎಣಿಸುತ್ತಿದೆ. ರಾಜ್ಯ ಸರಕಾರಕ್ಕೆ ಆಡಳಿತದ ಮೇಲೆ ಹಿಡಿತವಿಲ್ಲದಿರುವುದನ್ನು ಇದು ತೋರಿಸುತ್ತದೆ ಎಂದು ಆರೋಪಿಸಿದರು.

ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ 27 ಮರಳು ದಿಬ್ಬಗಳನ್ನು ಗುರುತಿಸಿದ್ದರೂ ಅವುಗಳಲ್ಲಿ 9ಕ್ಕೆ ಮಾತ್ರ ಶಿಫಾರಸ್ಸು ಕಳುಹಿಸಿ 7ಕ್ಕೆ ಮಾತ್ರ ಅನುಮೋದನೆ ಪಡೆದು ಕಣ್ಣೊರೆಸುವ ತಂತ್ರ ಅನುಸರಿಸಲಾಗಿದೆ ಎಂದು ಹೇಳಿದ ಕೋಟ, ಕಾನೂನಿನುಗುಣವಾಗಿಯೇ ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ಅವಕಾಶಗಳಿದ್ದರೂ, ಜಿಲ್ಲಾಡಳಿತ ಅದನ್ನು ಬಳಸಿಕೊಳ್ಳುತ್ತಿಲ್ಲ ಎಂದರು.

ಇದರಿಂದ ಮರಳುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸಂತ್ರಸ್ತ ಕುಟುಂಬಗಳು ಇಂದು ಬೀದಿಗೆ ಬರುವಂತಾಗಿದೆ. ಅವರಿಗೆ ಬೆಂಬಲವಾಗಿ ನಾವು ನ್ಯಾಯ ಸಿಗುವವರೆಗೂ ಧರಣಿಯನ್ನು ಮುಂದುವರಿಸಲಿದ್ದೇವೆ. ಈ ವಿಷಯದಲ್ಲಿ ಸರಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಯಾವುದೇ ರಾಜಿ ಇಲ್ಲ ಎಂದು ಕೋಟ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News