ಅ.24ರಂದು ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ವಜ್ರಮಹೋತ್ಸವ, ಪ್ರಧಾನ ಕಚೇರಿಯ ಉದ್ಘಾಟನೆ
ಉಡುಪಿ, ಅ.22:1958ರಲ್ಲಿ ಸ್ಥಾಪನೆಗೊಂಡ ಉಡುಪಿ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಚೇರಿ ಹಾಗೂ ವಜ್ರ ಮಹೋತ್ಸವ ಸಮಾರಂಭ ಅ.24ರ ಬುಧವಾರ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಎಂ.ಗಣೇಶ ಕಿಣಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿನ್ನಿಮುಲ್ಕಿಯಲ್ಲಿರುವ ನವೀಕೃತ ಕಟ್ಟಡವನ್ನು ಶಾಸಕ ಕೆ.ರಘುಪತಿ ಭಟ್ ಅವರು ಉದ್ಘಾಟಿಸಿದರೆ, ಪ್ರಧಾನ ಕಚೇರಿಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಅ.24ರ ಬೆಳಗ್ಗೆ 10ಗಂಟೆಗೆ ಉದ್ಘಾಟಿಸುವರು ಎಂದರು.
1958ರಲ್ಲಿ 67 ಸದಸ್ಯರೊಂದಿಗೆ 1120ರೂ. ಪಾಲು ಬಂಡವಾಳದೊಂದಿಗೆ ಆರಂಭಗೊಂಡ ಈ ಸಂಸ್ಥೆ ಇಂದು 32,788 ಸದಸ್ಯರು ಹಾಗೂ 2.07 ಕೋಟಿ ರೂ. ಪಾಲು ಬಂಡವಾಳವನ್ನು ಹೊಂದಿದೆ. ಜಿಲ್ಲೆಯ 9 ಕಡೆಗಳಲ್ಲಿ ತನ್ನ ಶಾಖೆಗಳನ್ನು ಸಹ ಹೊಂದಿದೆ ಎಂದು ಗಣೇಶ ಕಿಣಿ ವಿವರಿಸಿದರು.
ಸಂಘದ ವಜ್ರ ಮಹೋತ್ಸವ ಸಮಾರಂಭ ಅ.24ರಂದು ಬೆಳಗ್ಗೆ 11ಗಂಟೆಗೆ ಅಜ್ಜರಕಾಡಿನಲ್ಲಿರುವ ಪುರಭವನದಲ್ಲಿ ನಡೆಯಲಿದೆ. ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಮಂಗಳೂರು ಕಾಂಪ್ಕೋದ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕಷ ಅರುಣ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಮಂಗಳೂರು ಕೆಎಂಎಫ್‌ನ ಅಧ್ಯಕ್ಷ ರವಿರಾಜ್ ಹೆಗ್ಡೆ, ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ನಾಯಕ್ ಹಾಗೂ ಚಂದ್ರ ಪ್ರತಿಮಾ ಮುಖ್ಯ ಅತಿಥಿಗಳಾಗಿರುವರು ಎಂದರು. ಜಿಲ್ಲೆಯ ಹಿರಿಯ ಸಹಕಾರಿಗಳನ್ನು ಸನ್ಮಾನಿಸುವ ಕಾರ್ಯಕ್ರಮವಿದ್ದು, ಬಳಿಕ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ ಎಂದರು.
ಸುದ್ದಿಗೋಷ್ಠಿಯಲಲಿ ಸಂಘದ ನಿರ್ದೇಶಕರಾದ ಇಂದು ರಮಾನಂದ ಭಟ್, ನಾರಾಯಣ ಬಲ್ಲಾಳ್, ದೇವದಾಸ್ ಶೆಟ್ಟಿಗಾರ್, ಪ್ರದಾನ ವ್ಯವಸ್ಥಾಪಕ ರಾಜೇಶ್ ಹೆಗ್ಡೆ ಉಪಸ್ಥಿತರಿದ್ದರು.