ಸಿದ್ದಕಟ್ಟೆ : ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ ಸಂಘ ಉದ್ಘಾಟನೆ
ಬಂಟ್ವಾಳ, ಅ. 22: ಆಧುನಿಕತೆಯ ಭರಾಟೆಯಲ್ಲಿ ಯಕ್ಷಗಾನವನ್ನು ಪ್ರೋತ್ಸಾಹಿಸುವುದರಿಂದ ನಮ್ಮ ಸಂಸ್ಕೃತಿ ಉಳಿವಿಗೆ ದಾರಿಯಾಗುತ್ತದೆ. ಯಕ್ಷಗಾನವನ್ನು ಪ್ರೋತ್ಸಾಹಿಸಿದವರ ಸಂಸ್ಮರಣೆ, ಕಲಾವಿದರಿಗೆ ಗೌರವ ಮತ್ತು ಯಕ್ಷಗಾನವನ್ನು ಉಳಿಸಿ ಬೆಳೆಸುತ್ತಿರುವ ಯಕ್ಷ ಮಿತ್ರರು ಶ್ರೀಕ್ಷೇತ್ರ ಪೂಂಜ ಇದರ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮಿನಾರಾಯಣ ಆಳ್ವ ಹೇಳಿದ್ದಾರೆ.
ಸಿದ್ದಕಟ್ಟೆ ಹರ್ಷಲಿ ಸಭಾಭವನದ ವಠಾರದಲ್ಲಿ ರವಿವಾರ ನಡೆದ ಸಿದ್ದಕಟ್ಟೆಯ ನೂತನ ಸಂಘ ಯಕ್ಷಮಿತ್ರರು ಶ್ರೀ ಕ್ಷೇತ್ರ ಪೂಂಜ, ಸಿದ್ದಕಟ್ಟೆ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಜೆ ನಡೆದ ಪ್ರಶಸ್ತಿ ಪ್ರದಾನ, ಸಂಸ್ಮರಣೆ, ತಾಳಮದ್ದಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹಿರಿಯ ಯಕ್ಷಗಾನ ಅರ್ಥದಾರಿ, ವಿಮರ್ಶಕ ಡಾ. ಎಂ. ಪ್ರಭಾಕರ ಜೋಷಿ ಮಾತನಾಡಿ, ಕಲೆ ಮತ್ತು ಕ್ರೀಡೆ ನಮ್ಮನ್ನು ಉಲ್ಲಾಸಗೊಳಿಸುವ ವಿಚಾರಗಳು. ಪ್ರಸ್ತುತ ಕಲೆಗೆ ಮೌಲ್ಯ, ಪ್ರೋತ್ಸಾಹ ದೊರಕುತ್ತಿದ್ದು, ಕಲಾವಿದರು ಸದುಪಯೋಗಪಡಿಸಿಕೊಳ್ಳಬೇಕು. ಯಕ್ಷಗಾನದ ಬಗೆಗಿನ ಯಕ್ಷಮಿತ್ರರು ಸಂಘದ ಪ್ರಯತ್ನ ಮುಂದುವರೆಯಲಿ ಎಂದರು.
ಮೂಡಬಿದಿರೆ ಇತಿಹಾಸ ಸಂಶೋಧಕ ಡಾ. ಪುಂಡಿಕಾೈ ಗಣಪಯ್ಯ ಭಟ್ ಮಾತನಾಡಿ, ಯಕ್ಷಗಾನಕ್ಕೆ ವಿಶೇಷ ಕೊಡುಗೆ ನೀಡಿದ ಸಿದ್ದಕಟ್ಟೆಯಲ್ಲಿ ಯಕ್ಷ ಸಂಘಟನೆ ಇಲ್ಲದ ಕೊರತೆಯನ್ನು ನೂತನ ಸಂಘ ನೀಗಿಸಿದೆ. ಕಲಾವಿದ, ಪ್ರೇಕ್ಷಕ ಮತ್ತು ಸಂಘಟಕರು ಜತೆಗೂಡಿದಾಗ ಯಾವುದೇ ಕಲೆ ಬೆಳವಣಿಗೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ನೂತನ ಸಂಘ ಉತ್ತಮ ಕೊಡುಗೆಯಾಗಲಿ ಎಂದರು.
ಮೂಡಬಿದಿರೆ ಯಕ್ಷಗಾನ ವಿಮರ್ಶಕ ಎಂ. ಶಾಂತರಾಮ ಕುಡ್ವ ಅವರು ಮಾತನಾಡಿದರು. ಉಪನ್ಯಾಸಕ, ಲೇಖಕ ಡಾ. ಯೋಗೀಶ್ ಕೈರೋಡಿ ಅವರು ಪ್ರಾಸ್ತಾವಿಸಿದರು.
ವೇದಿಕೆಯಲ್ಲಿ ಶ್ರೀ ಕ್ಷೇತ್ರ ಪೂಂಜ ಇದರ ಆಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ, ಅರ್ಚಕ ಪ್ರಕಾಶ್ ಆಚಾರ್ಯ, ಉಪ್ಪಿರ ಶ್ರೀಮುಜಿಲ್ನಾಯ ದೈವಸ್ಥಾನ ಅಧ್ಯಕ್ಷ ಶ್ರೀಪ್ರಕಾಶ್ ಜೈನ್ ಜಂಕಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕ್ಷೇತ್ರದ ಪೂಂಜದ ಅರ್ಚಕರಾಗಿದ್ದ ದಿ. ರಾಮಚಂದ್ರ ಆಚಾರ್ಯ ಮತ್ತು ದಿ. ಅನಂತ ಆಚಾರ್ಯ ಅವರ ಸಂಸ್ಮರಣೆ ನಡೆಯಿತು.
ಬೂಬ ಮಾಸ್ಟರ್ ಮತ್ತು ರಮೇಶ್ ಭಟ್ ಮಾದೇರಿ ಅವರು ಸಂಸ್ಮರಣಾ ಭಾಷಣ ಮಾಡಿದರು. ಯಕ್ಷಗಾನ ಕಲಾವಿದರಾದ ಗಣೇಶ್ ಶರ್ಮ ಕೀರಿಕ್ಕಾಡು, ಪದ್ಮನಾಭ ಶೆಟ್ಟಿಗಾರ್ ಸಿದ್ದಕಟ್ಟೆ, ರಾಷ್ಟ್ರೀಯ ಕ್ರೀಡಾಪಟು ರಮ್ಯಶ್ರೀ ಜೈನ್ ಸಿದ್ದಕಟ್ಟೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಡಾ. ಯೋಗೀಶ್ ಕೈರೋಡಿ ಸ್ವಾಗತಿಸಿದರು. ವಕೀಲ ಸುರೇಶ್ ಶೆಟ್ಟಿ ಸಿದ್ದಕಟ್ಟೆ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಮಧ್ಯಾಹ್ನ ಹಿರಿಯ ಯಕ್ಷಗಾನ ಅರ್ಥದಾರಿ ವಾಸು ಶೆಟ್ಟಿ ಕುತ್ಲೋಡಿ ಅವರು ನೂತನ ಸಂಘವನ್ನು ಉದ್ಘಾಟಿಸಿದರು. ಬಳಿಕ ಶರಸೇತು ಬಂಧನ ಮತ್ತು ಸಾರಥ್ಯ ತ್ಯಾಗ-ಕರ್ಣಾವಸಾನ ತಾಳಮದ್ದಳೆ ನಡೆಯಿತು.