ಪರ್ಕಳ: ನೇತಾಜಿ ಬ್ಲೂ ತಂಡಕ್ಕೆ ಎನ್‌ಪಿಎಲ್ ಕ್ರಿಕೆಟ್ ಪ್ರಶಸ್ತಿ

Update: 2018-10-22 15:36 GMT

ಪರ್ಕಳ, ಅ.22: ಸ್ಥಳೀಯ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ನಡೆದ ನೇತಾಜಿ ಕ್ರಿಕೆಟ್ ಪ್ರೀಮಿಯರ್ ಲೀಗ್ ‘ವರ್ಣ ಸಮರ’ ಪಂದ್ಯಕೂಟದ ಅಂತಿಮ ಪಂದ್ಯದಲ್ಲಿ ನೇತಾಜಿ ರೆಡ್ ತಂಡವನ್ನು 37 ರನ್‌ಗಳ ಅಂತರದಿಂದ ಸೋಲಿಸಿದ ನೇತಾಜಿ ಬ್ಲೂ ತಂಡ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಲೀಗ್ ಮತ್ತು ನಾಕೌಟ್ ಮಾದರಿಯಲ್ಲಿ ನಡೆದ ಪಂದ್ಯಕೂಟದಲ್ಲಿ ಆಟಗಾರರನ್ನು ವಿವಿಧ ದರ್ಜೆಗಳಲ್ಲಿ ವಿಂಗಡಿಸಿ ಹರಾಜು ಪ್ರಕ್ರಿಯೆಯ ಮೂಲಕ ಆರು ವರ್ಣಗಳ ತಂಡಗಳಲ್ಲಿ ಹಂಚಲಾಗಿತ್ತು.

ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬ್ಲೂ ತಂಡ 15 ಓವರುಗಳಲ್ಲಿ 85ರ ಮೊತ್ತ ಗಳಿಸಿತು. ಉತ್ತರವಾಗಿ ನೇತಾಜಿ ರೆಡ್ ತಂಡ 48 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ಬ್ಲೂ ತಂಡದ ಗೌತಮ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಪಂದ್ಯಾವಳಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರೆಡ್ ತಂಡದ ಇಮ್ರಾನ್ ಆತ್ರಾಡಿ ಹಾಗೂ ಬ್ಲೂ ತಂಡದ ಗೌತಮ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಂಚಿಕೊಂಡರು. ಇಬ್ರಾಹಿಂ ಆತ್ರಾಡಿ ಉತ್ತಮ ಬ್ಯಾಟ್ಸ್‌ಮನ್, ಬ್ಲೂ ತಂಡದ ನಿತಿನ್ ಉಪಾಧ್ಯ ಉತ್ತಮ ಬೌಲರ್ ಗೌರವವನ್ನು ಪಡೆದರು. ಋಷಬ್ ಪರೀಕ ಉದಯೋನ್ಮುಖ ಆಟಗಾರನಾಗಿ ಮೂಡಿ ಬಂದರು.

ಸಮಾರೋಪ ಸಮಾರಂಭದಲ್ಲಿ ಪ್ರಸಾದ್ ಶೆಟ್ಟಿ ಕೊಳಂಬೆ, ಸುಧಾಕರ್ ಕಾಮತ್ ಮಣಿಪಾಲ, ದೀಪಕ್ ಕಿಣಿ ಮಣಿಪಾಲ, ಲಕ್ಮೀನಾರಾಯಣ ಆಚಾರ್ಯ ಉಡುಪಿ, ಹಾಜಿ ಕೆ. ಅಬೂಬಕರ್ ಭಾಗವಹಿಸಿದ್ದರು.

ಕ್ಲಬ್ಬಿನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ರಾಮದಾಸ್ ಮಧ್ವನಗರ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News