ವಂಚನೆ ಪ್ರಕರಣ: ಬ್ಯಾಂಕ್ ಶಾಖಾಧಿಕಾರಿ ವಿರುದ್ಧ ಗ್ರಾಹಕರ ನ್ಯಾಯಾಲಯ ತೀರ್ಪು
ಉಡುಪಿ, ಅ.22: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಂಡಿಕೇಟ್ ಬ್ಯಾಂಕ್ ಸಾಸ್ತಾನ ಶಾಖಾಧಿಕಾರಿ ವಿರುದ್ಧ ತೀರ್ಪು ನೀಡಿರುವ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ, ದೂರುದಾರರಿಗೆ 70ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಐರೋಡಿ ಗ್ರಾಮದ ಥೋಮಸ್ ರೋಡ್ರಿಗಸ್ ಸಿಂಡಿಕೇಟ್ ಬ್ಯಾಂಕ್ ಸಾಸ್ತಾನ ಶಾಖೆಯಲ್ಲಿ ಓವರ್ ಡ್ರಾಫ್ಟ್ ಸಾಲ 2ಲಕ್ಷ ರೂ. ಪಡೆದ ಬಗ್ಗೆ ಭದ್ರತೆಗಾಗಿ 50ಸಾವಿರ ರೂ. ಮತ್ತು 25ಸಾವಿರ ರೂ. ಮೌಲ್ಯದ ಎಲ್‌ಐಸಿ ಪಾಲಿಸಿ ಬಾಂಡ್‌ಗಳನ್ನು ನೀಡಿದ್ದರು. ಯಾವುದೇ ತಿಳುವಳಿಕೆ, ಮಾಹಿತಿ ಪತ್ರ ನೀಡದೆ ಬ್ಯಾಂಕಿನವರು ಕೆಲವೊಂದು ದಾಖಲೆಗಳನ್ನು ಸೃಷ್ಠಿ ಮಾಡಿ ಎಲ್‌ಐಸಿ ಪಾಲಿಸಿ ಬಾಂಡ್‌ಗಳನ್ನು ಸರೆಂಡರ್ ಮಾಡಿ ವಂಚಿಸಿ ಅನ್ಯಾಯ ಎಸಗಿರುವುದಾಗಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು.
ದೂರುದಾರರು ನೀಡಿದ 34 ದಾಖಲೆಗಳನ್ನು ಪರಿಶೀಲಿಸಿದ ವೇದಿಕೆಯ ಅಧ್ಯಕ್ಷೆ ಶೋಭಾ ಸಿ.ವಿ. ಶಾಖಾಧಿಕಾರಿಗಳು ಕೋರ್ಟ್, ವ್ಯಾಜ್ಯಗಳು ಸೇರಿದಂತೆ ಒಟ್ಟು 70ಸಾವಿರ ರೂ. ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಆದೇಶ ನೀಡಿದರು. ಈ ಆದೇಶದ ವಿರುದ್ಧ ಹೆಚ್ಚುವರಿ ಪರಿಹಾರ ಕೋರಿ ರಾಜ್ಯ ಗ್ರಾಹಕ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಲಾಗಿದ್ದು, ಅದನ್ನು ಪುರಸ್ಕರಿಸಿರುವ ಆಯೋಗ ಮುಂದಿನ ವಿಚಾರಣೆಯನ್ನು ಅ.30ಕ್ಕೆ ನಿಗದಿಪಡಿಸಿದೆ.