ವಿಚಾರಣೆಗೆ ಗೈರುಹಾಜರಿ: ಎಫೆಸ್ಸೆಲ್ ತಜ್ಞರಿಗೆ ದಂಡ
Update: 2018-10-22 21:25 IST
ಉಡುಪಿ, ಅ.22: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಗೈರುಹಾಜರಾಗಿರುವ ಬಗ್ಗೆ ಸಮಪರ್ಕ ವಿವರಣೆ ನೀಡದ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೊಬ್ಬರಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.
ಕೊಲೆ ಪ್ರಕರಣದ ಸಾಕ್ಷಿಯಾಗಿರುವ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋ ಗಾಲಯದ ತಜ್ಞ ಪುರುಷೋತ್ತಮ ಎಂಬವರಿಗೆ ವಿಚಾರಣೆಗೆ ಹಾಜರಾಗು ವಂತೆ ಹಲವು ಬಾರಿ ದಿನ ನಿಗದಿ ಪಡಿಸಲಾಗಿತ್ತು. ಆದರೆ ಅವರು ಬೆನ್ನು ನೋವಿನ ಕಾರಣದಿಂದ ವಿಾರಣೆಗೆ ಗೈರುಹಾಜರಾಗುತ್ತಿದ್ದರು.
ಕೋರ್ಟ್ ಮತ್ತೆ ಅ.22ರಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡುವಂತೆ ಸಮನ್ಸ್ ನೀಡಿತ್ತು. ಇಂದು ಕೂಡ ಅವರು ವಿಚಾರಣೆಗೆ ಗೈರು ಹಾಜರಾಗಿದಲ್ಲದೆ ಅದಕ್ಕೆ ಸರಿಯಾದ ವಿವರಣೆ ನೀಡದ ಹಿನ್ನೆಲೆಯಲ್ಲಿ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ದಂಡ ವಿಧಿಸಿ ಆದೇಶ ನೀಡಿದರು. ಮುಂದಿನ ವಿಚಾರಣೆಯನ್ನು ಅ.26ಕ್ಕೆ ಮುಂದೂಡಲಾಗಿದೆ.