ಹನಿಟ್ರಾಪ್ ಪ್ರಕರಣ: ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಕೆ
ಮಂಗಳೂರು, ಅ.22: ನಗರದಲ್ಲಿ ಕಳೆದ ಮಾರ್ಚ್‌ನಲ್ಲಿ ಹನಿಟ್ರ್ಯಾಪ್ ಮೂಲಕ ನಿವೃತ್ತ ಅಧಿಕಾರಿಯಿಂದ 3 ಲಕ್ಷ ರೂ. ವಸೂಲಿ ಮಾಡಿರುವ ಪ್ರಕರಣದ ಬಗ್ಗೆ ಡಿಸಿಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಎಸಿಪಿ ರಾಜೇಂದ್ರ ಅವರು ತನಿಖೆ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸೋಮವಾರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಅವರಿಗೆ ಸಲ್ಲಿಸಲಾಗಿದೆ.
ಈ ಕುರಿತಂತೆ ಆರೋಪ ಪಟ್ಟಿಯನ್ನು ಶೀಘ್ರದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆರೋಪ ಪಟ್ಟಿ ಸಲ್ಲಿಸಿದ ಬಳಿಕ ವಿವರಗಳನ್ನು ಮಾಧ್ಯಮಗಳಿಗೆ ನೀಡಲಾಗುವುದು ಎಂದು ಕಮಿಷರ್ ಟಿ.ಆರ್. ಸುರೇಶ್‌ಗೆ ತಿಳಿಸಿದ್ದಾರೆ.
ಪ್ರಕರಣದ ವಿವರ: ನಗರದ ಮಸಾಜ್ ಪಾರ್ಲರ್ ಒಂದರ ಮಹಿಳೆಯೊಬ್ಬಳು ನಿವೃತ್ತ ಅಧಿಕಾರಿಯೊಬ್ಬರಿಗೆ ಮಸಾಜ್ ಮಾಡುವ ನೆಪದಲ್ಲಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿದ್ದಳು. ಕಳೆದ ಮಾ. 20ರಂದು ಮೇರಿಹಿಲ್‌ನ ಮನೆಯೊಂದರಲ್ಲಿ ನಿವೃತ್ತ ಅಧಿಕಾರಿಗೆ ಮಸಾಜ್ ಆರಂಭಿಸಿದಾಗ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿ ಅಧಿಕಾರಿಯ ನಗ್ನ ವೀಡಿಯೊ ಚಿತ್ರೀಕರಣ ಮಾಡಿ 10 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಇದರಿಂದ ಆಘಾತಕ್ಕೊಳಗಾದರೂ ನಿವೃತ್ತ ಅಧಿಕಾರಿ ಪ್ರತಿರೋಧ ತೋರಿಸದೆ 3 ಲಕ್ಷ ರೂ.ನ್ನು ತಂಡಕ್ಕೆ ನೀಡಿದ್ದರು.
ಕೆಲವು ದಿನಗಳ ಬಳಿಕ ಪ್ರಕರಣ ಕಾವೂರು ಪೊಲೀಸರ ಗಮನಕ್ಕೆ ಬಂದಿದ್ದು, ನಿವೃತ್ತ ಅಧಿಕಾರಿಯನ್ನು ಕರೆಸಿ ಮಾಹಿತಿ ಕಲೆ ಹಾಕಿದ್ದರು. ಮಾ.23ರಂದು 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.
ಮಸಾಜ್ ಮಾಡಿಸಿಕೊಳ್ಳಲು ಮಹಿಳೆ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಈ ಹಿಂದೆ ಸಿಸಿಬಿ ಪೊಲೀಸ್ ಸಿಬ್ಬಂದಿ ಒಬ್ಬರ ಬಳಿ ಇತ್ತು ಎಂಬ ಸಂಗತಿ ತನಿಖೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೊಲೀಸ್ ಕಮಿಷನರ್ ಸಿಸಿಬಿ ಸಿಬ್ಬಂದಿಗೆ ನೋಟಿಸ್ ನೀಡಿದ್ದರು. ಇದಕ್ಕೆ ಉತ್ತರಿಸಿದ್ದ ಸಿಬ್ಬಂದಿ, ‘ಮಹಿಳೆ ಈ ಹಿಂದೆ ಪರಿಚಿತಳಾಗಿದ್ದರಿಂದ ಆಕೆಗೆ ತನ್ನ ಮೊಬೈಲ್ ಸಿಮ್ ನೀಡಿದ್ದೆ’ ಎಂದು ತಿಳಿಸಿದ್ದರು. ಇದೀಗ ಈ ಎಲ್ಲ ವಿಷಯಗಳನ್ನು ಒಳಗೊಂಡಂತೆ ಸಮಗ್ರ ತನಿಖೆ ನಡೆಸಿ ವರದಿಯನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾಗಿದೆ