ಮರಳು ಸಮಸ್ಯೆ ಇತ್ಯರ್ಥಕ್ಕೆ ರಾಜ್ಯಸರಕಾರ ಮದ್ಯ ಪ್ರವೇಶಿಸಲಿ : ಯಶ್‌ಪಾಲ್ ಸುವರ್ಣ
ಉಡುಪಿ, ಅ.22: ಜಿಲ್ಲೆಯಲ್ಲಿ ತೀವ್ರಗೊಳ್ಳುತ್ತಿರುವ ಮರಳು ಸಮಸ್ಯೆಗೆ ಜಿಲ್ಲಾಡಳಿತದ ಹಠಮಾರಿ ಧೊರಣೆಯೇ ಕಾರಣವಾಗಿದ್ದು, ರಾಜ್ಯ ಸರಕಾರ ಕೂಡಲೆ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆಯನ್ನು ಜಿಲ್ಲಾಡಳಿತ ಉದ್ಧೇಶ ಪೂರ್ವಕವಾಗಿ ಜೀವಂತವಾಗಿಟ್ಟಿದ್ದು, ಇದರ ಇತ್ಯರ್ಥಕ್ಕೆ ಯಾವುದೇ ಕಾನೂನಾತ್ಮಕ ಉಪಾಯವನ್ನೂ ಕಂಡುಕೊಂಡಿಲ್ಲ. ಸರಕಾರ ಮತ್ತು ಜಿಲ್ಲಾಡಳಿತದ ಬೇಜವಾಬ್ದಾರಿತನದಿಂದ ಈ ಮೂರು ವರ್ಷಗಳಲ್ಲಿ ನಿರ್ಮಾಣ ಕಾರ್ಯಗಳಿಗೆ ಮರಳು ಸಿಗದೆ ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ. ಬಡಜನರ ಮನೆಗಳು ಅರ್ಧಕ್ಕೆ ನಿಂತಿವೆ. ಮರಳು ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬಾಡಿಗೆ ವಾಹನ ಚಾಲಕರು, ಕೂಲಿಯಾಳುಗಳು ಗುತ್ತಿಗೆದಾರರು ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಎಂದವರು ದೂರಿದ್ದಾರೆ.
ಇದೆಲ್ಲವನ್ನೂ ಜಿಲ್ಲಾಡಳಿತ ಕಣ್ಣಿದ್ದು ಕುರುಡರ ಹಾಗೆ ನೋಡುತ್ತಿದ್ದು, ಜನಸಾಮಾನ್ಯರ ಹೋರಾಟಕ್ಕೂ ಕವಡೆಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿಗಳು ಸಮಸ್ಯೆಯನ್ನು ಶೀಘ್ರವೇ ಸರಿಪಡಿಸಬೇಕೆಂದು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದರೂ ಇನ್ನೂ ಅವರು ಕಾರ್ಯಪ್ರವೃತ್ತಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ವಾರದೊಳಗೆ ಈ ಸಮಸ್ಯೆಗೆ ಜಿಲ್ಲಾಡಳಿತ ತಾರ್ಕಿಕ ಅಂತ್ಯವನ್ನು ಕಂಡುಕೊಳ್ಳದೇ ಹೋದಲ್ಲಿ ಜಿಲ್ಲಾಡಳಿತದ ವಿರುದ್ಧ ವ್ಯಾಪಕ ಜನಾಂದೋಲನ ನಡೆಸಲಾಗುವುದು ಎಂದು ಯಶ್ಪಾಲ್ ಸುವಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.