ರಮಣ್ ಸಿಂಗ್ ವಿರುದ್ಧ ಕಾಂಗ್ರೆಸ್ ನಿಂದ ಸ್ಪರ್ಧಿಸಲಿರುವ ವಾಜಪೇಯಿ ಸೊಸೆ

Update: 2018-10-22 17:22 GMT

ರಾಯ್‌ಪುರ, ಅ. 22: ಚತ್ತೀಸ್‌ಗಢದಲ್ಲಿ ನವೆಂಬರ್‌ನಲ್ಲಿ ನಡೆಯಲಿರುವ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಚತ್ತೀಸ್‌ಗಢದ ಮುಖ್ಯಮಂತ್ರಿ ರಮಣ ಸಿಂಗ್ ವಿರುದ್ಧ ಕಾಂಗ್ರೆಸ್ ಟಿಕೆಟ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸೊಸೆ ಕರುಣಾ ಶುಕ್ಲಾ ಸ್ಪರ್ಧಿಸಲಿದ್ದಾರೆ.

  ಕಾಂಗ್ರೆಸ್‌ನ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ರಾಜ್ನಂದ್‌ಗಾಂವ್‌ನ ಪಕ್ಷದ ಅಭ್ಯರ್ಥಿಯಾಗಿ ಕರುಣಾ ಶುಕ್ಲಾ ಅವರ ಹೆಸರು ಪ್ರಕಟಿಸಲಾಗಿದೆ. 2003ರಲ್ಲಿ ಚತ್ತೀಸ್‌ಗಢದ ಮುಖ್ಯಮಂತ್ರಿಯಾಗುವ ಮುನ್ನ ರಮಣ ಸಿಂಗ್ ಅವರು ವಾಜಪೇಯಿ ಸಂಪುಟದಲ್ಲಿ ಸೇವೆ ಸಲ್ಲಿಸಿದ್ದರು.

ರಾಜ್ಯ ವಿಧಾನ ಸಭೆ ಮೊದಲ ಹಂತದ ಚುನಾವಣೆಗೆ 12 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಅಕ್ಟೋಬರ್ 18ರಂದು ಬಿಡುಗಡೆ ಮಾಡಿತ್ತು. 90 ಸ್ಥಾನದ ವಿಧಾನ ಸಭೆ ಚುನಾವಣೆ ಎರಡು ಹಂತದಲ್ಲಿ ನವೆಂಬರ್ 12 ಹಾಗೂ ನವೆಂಬರ್ 20ರಂದು ನಡೆಯಲಿದೆ.

  ಮೊದಲ ಹಂತದ ಚುನಾವಣೆಯಲ್ಲಿ ನಕ್ಸಲ್ ಪ್ರಭಾವಿತ ಬಸ್ತಾರ್, ಬಿಜಾಪುರ, ದಾಂತೆವಾಡ, ಸುಕ್ಮಾ, ಕೊಂಡಗಾಂವ್, ಕಂಕೇರ್, ನಾರಾಯಣಪುರ, ರಾಜ್ನಾಂದ್‌ಗಾವ್ ಸಹಿತ 18 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ರಾಜ್ನಂದ್‌ಗಾಂವ್ ಜಿಲ್ಲೆಯ 6 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಇಂದು ಘೋಷಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News