ಚುನಾವಣಾ ಆಯುಕ್ತರ ನೇಮಕಕ್ಕೆ ಕೊಲಿಜಿಯಂ ವ್ಯವಸ್ಥೆ ಜಾರಿ: ಅರ್ಜಿ ವಿಚಾರಣೆಗೆ ಸ್ವೀಕರಿಸಿದ ಸುಪ್ರೀಂ
ಹೊಸದಿಲ್ಲಿ, ಅ.23: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಹಾಗೂ ಚುನಾವಣಾ ಆಯುಕ್ತರ(ಇಸಿ) ನೇಮಕಕ್ಕೆ ಕೊಲಿಜಿಯಂ ರೀತಿಯ ನೇಮಕಾತಿ ಪ್ರಕ್ರಿಯೆ ಅಳವಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ವಹಿಸಿಕೊಟ್ಟಿದೆ.
ವಕೀಲ ಪ್ರಶಾಂತ್ ಭೂಷಣ್ ಪ್ರಸ್ತಾವಿಸಿದ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರಿದ್ದ ನ್ಯಾಯಪೀಠವು, ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿದ ವಿಷಯವನ್ನು ವಿಸ್ತೃತ ಸಾಂವಿಧಾನಿಕ ಪೀಠಕ್ಕೆ ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು ಮತ್ತು ಈ ಬಗ್ಗೆ ಸುಪ್ರೀಂಕೋರ್ಟ್ ಸೂಚನೆ ನೀಡಬೇಕು ಎಂದು ಕೋರಿ ಅನೂಪ್ ಬರನ್‌ವಾಲ್ ಎಂಬವರು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದಾರೆ. ಈ ಮನವಿಯನ್ನು ವಿರೋಧಿಸಿದ ಕೇಂದ್ರ ಸರಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್, ಮುಖ್ಯ ಚುನಾವಣಾಧಿಕಾರಿಯ ಸ್ಥಾನವನ್ನು ದುರುಪಯೋಗಪಡಿಸಿಕೊಂಡ ದೂರುಗಳು ಇದುವರೆಗೆ ಕೇಳಿಬಂದಿಲ್ಲ ಎಂದರಲ್ಲದೆ ಟಿ.ಎನ್. ಶೇಷನ್ ಹಾಗೂ ಇತರ ಕೆಲವು ಮುಖ್ಯ ಚುನಾವಣಾ ಆಯುಕ್ತರ ಹೆಸರನ್ನು ಉಲ್ಲೇಖಿಸಿದರು.