ಉಳ್ಳಾಲ ದರ್ಗಾಕ್ಕಾಗಿ ಹಣ ಸಂಗ್ರಹಕ್ಕೆ ಆಡಳಿತ ಸಮಿತಿ ಯಾರನ್ನೂ ನೇಮಿಸಿಲ್ಲ: ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ

Update: 2018-10-23 15:33 GMT

ಮಂಗಳೂರು, ಅ.23: ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಆರ್ಥಿಕ ಸಮಸ್ಯೆಯಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿರುವ ಆರೋಪ ಸುಳ್ಳಿನ ಕಂತೆಯಾಗಿದೆ, ಇದೇ ನೆಪದಲ್ಲಿ ಸಂಘಟನೆಯೊಂದಕ್ಕೆ ಸೇರಿದ ಕೆಲವು ಯುವಕರ ತಂಡ ಕೊಲ್ಲಂ, ಹಾಸನ, ಕಾಸರಗೋಡು ಪ್ರದೇಶದಲ್ಲಿ ಹಣ ಸಂಗ್ರಹ ಮಾಡುತ್ತಿರುವ ಮಾಹಿತಿ ಬಂದಿದ್ದು ಇದು ಅಪರಾಧ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು.

ಮಂಗಳವಾರ ದರ್ಗಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಳ್ಳಾಲ ದರ್ಗಾ ಕಾರಣಿಕ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಇಲ್ಲಿಗೆ ಹಣದ ರೂಪದಲ್ಲಿ ಹರಕೆ ಇಡುವವರು ನೇರವಾಗಿ ದರ್ಗಾಕ್ಕೇ ತಂದು ಪಾವತಿಸಬೇಕಿದ್ದು, ಹಣ ಸಂಗ್ರಹಕ್ಕಾಗಿ ದರ್ಗಾ ಆಡಳಿತ ಹಣ ಸಂಗ್ರಹಕ್ಕೆ ಯಾರನ್ನೂ ನೇಮಿಸಿಲ್ಲ. ಹರಕೆ ಪಾವತಿಯಲ್ಲಿ ಕೇರಳಿಗರ ಕೊಡುಗೆ ದೊಡ್ಡದು ಎಂದರು.

ಇಲ್ಲಿಗೆ ಹರಕೆಯಾಗಿ ಇಡಲಾಗುವ ಆಡುಗಳು ನೇರವಾಗಿ ಯಾವುದಾದರೊಂದು ರೂಪದಲ್ಲಿ ದರ್ಗಾ ತಲುಪುತ್ತವೆ. ದರ್ಗಾದ ನೂತನ ಸಮಿತಿ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳಾಗಿದ್ದು ಇಲ್ಲಿ ಯಾವುದೇ ಬಣಗಳಿಲ್ಲ. ಕೆಲವರು ಆಡಳಿತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ ಮಾಡುತ್ತಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆಡಳಿತ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಕಳೆದ ಎರಡೂವರೆ ವರ್ಷಗಳಲ್ಲಿ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ದರ್ಗಾ ಕ್ಯಾಂಪಸ್‌ನಲ್ಲಿ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಪಡೆಯುತ್ತಿರುವ 500ರಷ್ಟು ಮಕ್ಕಳಿದ್ದಾರೆ. ಮಹಿಳೆಯರಿಗೆ ಕಾಲೇಜು ಆರಂಭಿಸಲಾಗಿದೆ. ಸಹಾಯ ಯಾಚಿಸಿ ಯಾವುದೇ ಭಾಗದಿಂದ ಬರುವ ಜನರಿಗೆ ಜಾತಿ, ಧರ್ಮ ನೋಡದೆ ಸಹಾಯ ಮಾಡಲಾಗುತ್ತಿದೆ ಎಂದರು.

ದರ್ಗಾ ಹೆಸರಿಗೆ ಕಳಂಕ ತರುವ ಯತ್ನ: ಕೋಮು ಸೂಕ್ಷ್ಮಪ್ರದೇಶ ಎನ್ನುವ ಕಪ್ಪು ಚುಕ್ಕೆಯನ್ನು ಎರಡೂವರೆ ವರ್ಷದಲ್ಲಿ ಅಳಿಸಿ ಹಾಕಲಾಗಿದೆ. ಇಂತಹ ಜನಪರ ಕಾರ್ಯಗಳನ್ನು ಸಹಿಸಲಾರದ ತಂಡ ದರ್ಗಾ ಹೆಸರಿಗೆ ಕಳಂಕ ತರುವ ಪ್ರಯತ್ನ ಮಾಡುತ್ತಿದೆ. ಕೆಲವು ವರ್ಷಗಳ ಹಿಂದೆ ಇ.ಕೆ. ಸಂಸ್ಥೆಯಿಂದ ಪುಸ್ತಕ ತರಿಸಲಾಗುತ್ತಿದ್ದರೆ, ಬಳಿಕ ಎ.ಪಿ. ಸಂಸ್ಥೆಯಿಂದ ತರಲಾಗುತ್ತಿತ್ತು. ಉಳ್ಳಾಲದಲ್ಲಿ ಕಣಚೂರು ಮೋನು ಅವರ ಆಡಳಿತ ಅವಧಿಯಲ್ಲಿ ಕರ್ನಾಟಕ ವಿದ್ಯಾಭ್ಯಾಸ ಬೋರ್ಡ್ ಆರಂಭಿಸಲಾಗಿದ್ದು, ಸ್ವಂತ ಸಿಲೆಬಸ್ ಸ್ಥಾಪಿಸಲಾಗಿದೆ. ಕರ್ನಾಟಕದಾದ್ಯಂತ ಅದೇ ಪುಸ್ತಕ ಕೊಡಿಸುವ ಯೋಜನೆ ಇತ್ತಾದರೂ ಕೆಲವರ ಅಸಹಕಾರದಿಂದ ಯೋಜನೆ ಈಡೇರಿಲ್ಲ ಎಂದು ಹೇಳಿದರು.

ಕರ್ನಾಟಕ ಪಠ್ಯಕ್ರಮ ಅಳವಡಿಸಲು ದರ್ಗಾ ಅಧೀನದ 32 ಮಸೀದಿಗಳ ಪೈಕಿ ಆರಂಭದಲ್ಲಿ 13 ಮಸೀದಿಗಳ ವಿರೋಧವಿತ್ತಾದರೂ ಈಗ ಕೇವಲ ಎಂಟು ಮಸೀದಿಗಳಿಂದ ವಿರೋಧ ವ್ಯಕ್ತವಾಗಿದೆ. ದರ್ಗಾಕ್ಕೆ ವಾರ್ಷಿಕ ಆರು ಕೋಟಿ ರೂ. ಅನುದಾನ ಹರಕೆ ಸೇರಿದಂತೆ ವಿವಿಧ ರೂಪದಲ್ಲಿ ಹರಿದು ಬರುತ್ತಿದ್ದು, ಅದೆಲ್ಲವನ್ನು ವಿವಿಧ ಕಾರ್ಯಗಳಿಗೆ ವಿನಿಯೋಗಿಸಲಾಗುತ್ತಿದೆ. ಸರಕಾರವೂ ಅನುದಾನ ನೀಡುತ್ತಾ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 15 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಶೌಚಾಲಯ ನಿರ್ಮಿಸಿ ಕೊಡುತ್ತಿದೆ. ದರ್ಗಾದಲ್ಲಿ ಪ್ರತಿದಿನ ಅನ್ನದಾನ ನಡೆಯುತ್ತಿದೆ. ಅಲ್ಲದೆ, ಸರಕಾರ ಮಂಜೂರು ಮಾಡಿರುವ 75 ಲಕ್ಷ ರೂ. ಅನುದಾನದಲ್ಲಿ 30 ಕೊಠಡಿಗಳ ಯಾತ್ರಿ ನಿವಾಸ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.

ಪ್ರಧಾನ ಕಾರ್ಯದರ್ಶಿ ತ್ವಾಹಾ ಮುಹಮ್ಮದ್, ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯೀಲ್, ಬಾವಾ ಮುಹಮ್ಮದ್, ಸದಸ್ಯರಾದ ವಿ.ಸಿ.ಕಾಸಿಂ, ಫಾರೂಕ್ ಉಳ್ಳಾಲ್, ಅಮೀರ್, ಆಸಿಫ್ ಅಬ್ದುಲ್ಲಾ, ಅಲಿಮೋನು, ಕೆ.ಎನ್. ಮುಹಮ್ಮದ್, ಹಸೈನಾರ್, ಹಸನ್ ಕೈಕೊ ಹಾಗೂ ಲತೀಫ್ ಮೋನು ಮೇಲಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News