ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಇಬ್ಬರು ಮೃತ್ಯು
Update: 2018-10-23 21:25 IST
ಹೌರಾ (ಪ.ಬಂಗಾಳ),ಅ.23: ಪಶ್ಚಿಮ ಬಂಗಾಳದ ಹೌರಾದಲ್ಲಿರುವ ಸಂತ್ರಗಚಿ ರೈಲ್ವೇ ನಿಲ್ದಾಣದ ಮೇಲ್ಸೇತುವೆಯಲ್ಲಿ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಟ ಇಬ್ಬರು ಮೃತಪಟ್ಟಿದ್ದು, ಹದಿನಾಲ್ಕು ಮಂದಿ ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ.
ಸಂಜೆ 6.30ರ ಹೊತ್ತಿಗೆ ಒಂದು ಎಕ್ಸ್‌ಪ್ರೆಸ್ ರೈಲು ಮತ್ತು ಎರಡು ಲೋಕಲ್ ರೈಲುಗಳು ಒಂದೇ ಸಮಯದಲ್ಲಿ ನಿಲ್ದಾಣಕ್ಕೆ ಆಗಮಿಸಿದಾಗ ಈ ಮೂರೂ ಪ್ಲಾಟ್‌ಫಾರ್ಮ್‌ಗಳನ್ನು ಸಂಪರ್ಕಿಸುವ ಕಾಲ್ಸೇತುವೆಯಲ್ಲಿ ಪ್ರಯಾಣಿಕರು ರೈಲಿಗೇರಲು ಕಕ್ಕಾಬಿಕ್ಕಿಯಾಗಿ ಓಡಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಹನ್ನೊಂದು ಮಂದಿಯನ್ನು ಹೌರಾ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರಿಗೆ ನಿಲ್ದಾಣದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.