ಫ್ರಾನ್ಸ್‌ನ ಬುರ್ಖಾ ನಿಷೇಧಕ್ಕೆ ವಿಶ್ವಸಂಸ್ಥೆ ಟೀಕೆ
ಜಿನೇವ, ಅ. 23: ಫ್ರಾನ್ಸ್‌ನ ಬುರ್ಖಾ ನಿಷೇಧವನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿ ಮಂಗಳವಾರ ಟೀಕಿಸಿದೆ ಹಾಗೂ ಫ್ರಾನ್ಸ್‌ನ ಈ ಕಾನೂನು ಇಬ್ಬರು ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ.
ಈ ಇಬ್ಬರು ಮಹಿಳೆಯರು ಪೂರ್ಣ ಮುಖವನ್ನು ಆವರಿಸುವ ಬುರ್ಖಾವನ್ನು ಸಾರ್ವಜನಿಕ ಸ್ಥಳದಲ್ಲಿ ಧರಿಸಿರುವುದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.
ದಂಡ ಪಾವತಿಸಿದ ಮಹಿಳೆಯರಿಗೆ ಪರಿಹಾರ ನೀಡಬೇಕು ಹಾಗೂ ಮುಖ ಮುಚ್ಚುವ ಬಟ್ಟೆಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಧರಿಸುವುದನ್ನು ನಿಷೇಧಿಸುವ 2010ರ ಕಾನೂನನ್ನು ಮರುಪರಿಶೀಲಿಸಬೇಕು ಎಂಬುದಾಗಿ ಸಮಿತಿ ಕರೆ ನೀಡಿದೆ.
‘‘ಧಾರ್ಮಿಕ ನಂಬಿಕೆಗಳನ್ನು ಪ್ರದರ್ಶಿಸುವ ದೂರುದಾರರ ಹಕ್ಕಿಗೆ ಫ್ರಾನ್ಸ್ ಕಾನೂನು ಅಡ್ಡಿಯಾಗಿದೆ’’ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಿತಿಯು ಮಂಗಳವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಭದ್ರತೆ ಮತ್ತು ಸಾಮಾಜಿಕ ಕಾರಣಗಳಿಗಾಗಿ ಬುರ್ಖಾ ನಿಷೇಧ ಅಗತ್ಯ ಎಂಬ ಫ್ರಾನ್ಸ್‌ನ ವಾದದಿಂದ ನಮಗೆ ಸಮಾಧಾನವಾಗಿಲ್ಲ ಎಂದು ಅದು ಹೇಳಿದೆ.
‘‘ಬುರ್ಖಾ ನಿಷೇಧ ಕಾನೂನು, ಪೂರ್ಣವಾಗಿ ಮುಖ ಮುಚ್ಚುವ ಮಹಿಳೆಯರ ರಕ್ಷಣೆ ಮಾಡುವ ಬದಲು, ಅವರ ಮೇಲೆ ದುಷ್ಪರಿಣಾಮ ಬೀರಬಹುದಾಗಿದೆ. ಅವರನ್ನು ಅವರ ಮನೆಗಳಿಗೆ ಸೀಮಿತಗೊಳಿಸಬಹುದಾಗಿದೆ. ಸಾರ್ವಜನಿಕ ಸೇವೆಗಳನ್ನು ಪಡೆಯುವುದರಿಂದ ಅವರನ್ನು ತಡೆಯಬಹುದಾಗಿದೆ ಹಾಗೂ ಅಂತಿಮವಾಗಿ ಅವರನ್ನು ಮೂಲೆಗುಂಪಾಗಿಸಬಹುದಾಗಿದೆ’’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.