×
Ad

ಅನ್ಯಾಯ ವಿರುದ್ದ ಹೋರಾಟಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಪ್ರೇರಣೆ : ಉಡುಪಿ ಡಿಸಿ ಪ್ರಿಯಾಂಕ

Update: 2018-10-23 22:09 IST

ಉಡುಪಿ, ಅ.23: ಸಮಾಜದಲ್ಲಿರುವ ಅನ್ಯಾಯ, ಅಸಮಾನತೆ, ಸಾಮಾಜಿಕ ಪಿಡುಗುಗಳು ನಿವಾರಣೆಯಾಗುವವರೆಗೂ ಹೋರಾಟ ನಿರಂತರವಾಗಿ ರಬೇಕು. ಇಂತಹ ಹೋರಾಟಗಳಿಗೆ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದ್ದಾರೆ.

ಮಂಗಳವಾರ ಜಿಲ್ಲಾಡಳಿತ ಮತ್ತು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ವಳಕಾಡು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ ಕಿತ್ತೂರ ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕಿತ್ತೂರ ಚೆನ್ನಮ್ಮ ಬ್ರಿಟಿಷರು ನಡೆಸುತ್ತಿದ್ದ ಅನ್ಯಾಯ, ಅಸಮಾನತೆಯ ವಿರುದ್ದ ಹೋರಾಟ ಮಾಡಿದವರು. ಸ್ವಾತಂತ್ರ ಪೂರ್ವದಲ್ಲಿ ಚೆನ್ನಮ್ಮ ನಡೆಸಿದ ಹೋರಾಟದ ಕಾರಣಗಳು ಇಂದಿನ ಸಮಾಜದಲ್ಲೂ ಮುಂದುವರಿದಿವೆ. ಸಮಾಜದಲ್ಲಿ ಇಂದಿಗೂ ಆಚರಣೆಯಲ್ಲಿರುವ ಸಾಮಾಜಿಕ ಪಿಡುಗು, ಅಸಮಾನತೆ ವಿರುದ್ದ ಹೋರಾಟ ನಡೆಸಲು ಚೆನ್ನಮ್ಮ ಪ್ರೇರಣೆಯಾಗಬೇಕು. ಚೆನ್ನಮ್ಮರ ಬದುಕು ಎಲ್ಲರಿಗೂ ಮಾದರಿಯಾಗಿರಬೇಕು ಎಂದವರು ನುಡಿದರು.

ಕಿತ್ತೂರ ರಾಣಿ ಚೆನ್ನಮ್ಮ ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀಕಾಂತ ಶೆಟ್ಟಿ, ದೇಶದ ಮೊದಲ ಸ್ವಾತಂತ್ರ ಸಂಗ್ರಾಮಕ್ಕಿಂತಲೂ ಮುಂಚೆ ಬ್ರಿಟಿಷರ ವಿರುದ್ದ ಚೆನ್ನಮ್ಮ ಹೋರಾಡಿದ್ದರು. ಬ್ರಿಟಿಷರ ನಿರಂತರ ದಬ್ಬಾಳಿಕೆ, ದೌರ್ಜನ್ಯ ವಿರುದ್ದ ಹೋರಾಡಿದ್ದ ಅವರ ಬದುಕು ಯುವ ಜನತೆಗೆ ಪ್ರೇರಣೆಯಾಗಬೇಕು. ದೇಶದ ಸ್ವಾತಂತ್ರ ಹೋರಾಟದಲ್ಲಿ ಜೀವ ಬಲಿದಾನ ಮಾಡಿದ ಎಲ್ಲಾ ಮಹನೀಯರನ್ನು ನೆನೆಯಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿ ಅಧ್ಯಕ್ಷತೆ ವಹಿಸಿದ್ದರು. ಎಎಸ್ಪಿ ಕುಮಾರಚಂದ್ರ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಸ್ವಾಗತಿಸಿದರು. ವಳಕಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ನಿರ್ಮಲಾ ವಂದಿಸಿದರು. ಇಲಾಖೆಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮಾ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News